11:28 PM Saturday 24 - January 2026

ಭಾರತಕ್ಕೆ ಹೆದರಿ ಅಭಿನಂದನ್ ಬಿಡುಗಡೆ ಹೇಳಿಕೆ |  ಆತುರಾತುರವಾಗಿ ಪತ್ರಿಕಾಗೋಷ್ಠಿ ಕರೆದ ಪಾಕಿಸ್ತಾನ ಸೇನಾ ಮುಖ್ಯಸ್ಥ ಹೇಳಿದ್ದೇನು ಗೊತ್ತಾ?

30/10/2020

ಇಸ್ಲಮಾಬಾದ್: ಭಾರತದ ಪೈಲೆಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೇನೆಯು ಭಾರತದ ಮೇಲಿನ ಭಯದಿಂದ ಬಿಡುಗಡೆ ಮಾಡಿದೆ ಎಂಬ ಪಾಕಿಸ್ತಾನ ಸಂಸದನ ಹೇಳಿಕೆ ಇದೀಗ ಪಾಕಿಸ್ತಾನದಲ್ಲಿ ಕಿಡಿ ಹತ್ತಿಸಿದ್ದು, ಈ ಸಂಬಂಧ ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರ್ ಜನರಲ್ ಮೇಜ್ ಜನರಲ್ ಬಾಬರ್ ಇಫ್ತಿಕಾರ್ ಆತುರಾತುರ ಪತ್ರಿಕಾಗೋಷ್ಠಿಯನ್ನು ಕರೆದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.


ಪಾಕಿಸ್ತಾನ ಸಂಸತ್ ನಲ್ಲಿ ಪಿಎಂಎಲ್-ಎನ್ ನಾಯಕ ಮತ್ತು ಪಾಕಿಸ್ತಾನದ ಮಾಜಿ ಸಂಸತ್ತಿನ ಮಾಜಿ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್, ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರವನ್ನು ಪ್ರಶ್ನಿಸಿ, ಇಮ್ರಾನ್ ಖಾನ್ ಸರ್ಕಾರವು ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಯದಿಂದ ಬಿಡುಗಡೆ ಮಾಡಲಾಗಿದೆ. ಅಭಿನಂದನ್ ಅವರ ವಿಚಾರದಲ್ಲಿ ನಮ್ಮ ವಿದೇಶಾಂಗ ಸಚಿವರ ಕಾಲು ನಡುಗುತ್ತಿತ್ತು ಎಂದು ಆರೋಪಿಸಿದ್ದರು.


ಅಭಿನಂದನ್ ನಮ್ಮ ದೇಶಕ್ಕೆ ಸಿಹಿತಿಂಡಿ ವಿತರಿಸಲು ಬಂದಿರಲಿಲ್ಲ,  ಆತ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಬಂದಿದ್ದ.ಅಭಿನಂದನ್ ರನ್ನು ಬಿಡುಗಡೆ ಮಾಡಲು ಪಾಕಿಸ್ತಾನದಲ್ಲಿ ಉನ್ನತಮಟ್ಟದ ಸಭೆ ಕೂಡ ನಡೆದಿಲ್ಲ.  ನಮ್ಮ ಪ್ರಧಾನಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆದೇಶ ಪಡೆದು ಆಡಳಿತ ನಡೆಸುತ್ತಿದ್ದಾರೆಯೇ? ಎಂದು ಅಯಾಜ್ ಸಾದಿಕ್ ಆಡಳಿತ ಪಕ್ಷವನ್ನು ತರಾಟೆಗೆತ್ತಿಕೊಂಡಿದ್ದರು.


ಅಯಾಜ್ ಸಾದಿಕ್ ಹೇಳಿಕೆಯು ಇಮ್ರಾನ್ ಖಾನ್ ಸರ್ಕಾರಕ್ಕೆ ತೀವ್ರ ಹಾನಿಯನ್ನು ಮಾಡಿತ್ತು. ಈ ಹೇಳಿಕೆಗೆ ಪಾಕಿಸ್ತಾನದೊಳಗೆ ಬೇರೆಯೇ ವಾತಾವರಣ ಸೃಷ್ಟಿಯಾಗುವ ಲಕ್ಷಣಗಳು ದೊರೆಯುತ್ತಿದ್ದಂತೆಯೇ, ಒಂದೆಡೆ ಇಮ್ರಾನ್ ಖಾನ್ ಸರ್ಕಾರ, ಇನ್ನೊಂದೆಡೆ ಪಾಕಿಸ್ತಾನ ಸೇನೆ ತೀವ್ರ ವಿವಾದಕ್ಕೆ ಸಿಲುಕಿದೆ. ಈ ನಡುವೆ ಆತುರಾತುರವಾಗಿ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರ್ ಜನರಲ್ ಮೇಜ್ ಜನರಲ್ ಬಾಬರ್ ಇಫ್ತಿಕಾರ್ ಪತ್ರಿಕಾಗೋಷ್ಠಿ ಕರೆದಿದ್ದಾರೆ.


ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆ ಮಾಡಿರುವುದು “ಜವಾಬ್ದಾರಿಯುತ ರಾಜ್ಯದ ಪ್ರಬುದ್ಧ ಪ್ರತಿಕ್ರಿಯೆ” ಎಂದು ಬಾಬರ್ ಇಫ್ತಿಕಾರ್ ಅಭಿನಂದನ್ ಬಿಡುಗಡೆಯನ್ನು ಸಮರ್ಥಿಸಿದರು. ಈ ಸಂಬಂಧ ನಿನ್ನೆ ಸಂಸತ್ ನಲ್ಲಿ ನೀಡಿರುವ ಹೇಳಿಕೆಯು ಸತ್ಯವನ್ನು ತಿರುಚಲು ಮಾಡಿರುವ ಪ್ರಯತ್ನವಾಗಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತವು ಎಲ್ಲ ಅಂತಾರಾಷ್ಟ್ರೀಯ ತತ್ವಗಳನ್ನು ಉಲ್ಲಂಘಿಸಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ.ಈ ದಾಳಿಯಿಂದ ಅವರು ಸೋಲು ಮತ್ತು ಪ್ರಪಂಚದ ರಾಷ್ಟ್ರಗಳ ಎದುರು ಅವಮಾನವನ್ನು ಎದುರಿಸಿದರು ಎಂದು ಪುಲ್ವಾಮಾ ದಾಳಿಯನ್ನು ವೈಭವೀಕರಿಸಿದರು.


ನಾವು ಶತ್ರುಗಳಿಗೆ ಪಾಠ ಕಲಿಸಲು ಪ್ರಯತ್ನಿಸಿದ್ದೇವೆ. ನಮ್ಮ ಭಯದಿಂದಾಗಿ ಶತ್ರುಗಳು ತಮ್ಮದೇ ಹೆಲಿಕಾಫ್ಟರ್ ಗಳನ್ನು ಹೊಡೆದುರುಳಿಸಿದ್ದಾರೆ. ನಮ್ಮ ಬಗ್ಗೆ ಭಾರತವು ಅಷ್ಟು ಭಯಭೀತವಾಗಿದೆ ಎಂದು ಬಾಬರ್ ಇಫ್ತಿಕಾರ್ ಪಾಕಿಸ್ತಾನಕ್ಕೆ ಆಗಿರುವ ಅವಮಾನಕ್ಕೆ ತೇಪೆ ಹಾಕಿ ಮುಚ್ಚಲು ಪ್ರಯತ್ನಿಸಿದ್ದಾರೆ.


ಇತ್ತೀಚಿನ ಸುದ್ದಿ

Exit mobile version