ಡೇಟಿಂಗ್ ಆ್ಯಪ್ ಗೆ ಹೋಗೋ ಮುನ್ನ ಎಚ್ಚರ: ಆನ್ ಲೈನ್ ಪ್ರೇಯಸಿಯನ್ನು ನೋಡಲು ಹೋದ ವಿವಾಹಿತ ವ್ಯಕ್ತಿ ಸೂಟ್ ಕೇಸ್ ನಲ್ಲಿ ಶವವಾಗಿ ಪತ್ತೆ..!

26/11/2023

ಆನ್‌ಲೈನ್‌ ಡೇಟಿಂಗ್‌ ಆ್ಯಪ್ ನಲ್ಲಿ ತಿಂಗಳ ಕಾಲ ಡೇಟಿಂಗ್ ಮಾಡಿ ಹೆಣ್ಣಿನ ಹಿಂದೆ ಹೋದ ಯುವಕನೊಬ್ಬ ಹೆಣವಾಗಿ ಪತ್ತೆಯಾದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಟಿಂಡರ್ ಎಂಬ ಆನ್‌ಲೈನ್ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಯನ್ನು ಹುಡುಕಿಕೊಂಡು ಹೋದ ನವದೆಹಲಿಯ ಯುವಕ ಜೈಪುರದಲ್ಲಿ ಶವವಾಗಿ ಪತ್ತೆಯಾಗಿದ್ದ. ಇದೀಗ ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ.

ಹತ್ಯೆಗೀಡಾದ ಯುವಕನನ್ನು ದುಷ್ಯಂತ್ ಶರ್ಮಾ ಎಂದು ಗುರುತಿಸಲಾಗಿದೆ. ದೆಹಲಿ ಮೂಲದ ಈತ ತನ್ನನ್ನು ವಿವಾನ್ ಕೊಹ್ಲಿ ಎಂಬ ನಕಲಿ ಹೆಸರಲ್ಲಿ ಟಿಂಡರ್ ಡೇಟಿಂಗ್ ಆ್ಯಪ್ ನಲ್ಲಿ ಅಕೌಂಟ್ ತೆರೆದಿದ್ದ. ಅಲ್ಲದೇ ತಾನು ಶ್ರೀಮಂತ ಉದ್ಯಮಿ ಅಂತ ಹೇಳಿಕೊಂಡಿದ್ದ. ಹೀಗೆ 2018ರಲ್ಲಿ ಪ್ರಿಯಾ ಸೇಠ್ ಎಂಬಾಕೆಯನ್ನು ಪರಿಚಯಿಸಿಕೊಂಡು ಆನ್‌ಲೈನ್‌ನಲ್ಲೇ ಚಾಟಿಂಗ್, ಡೇಟಿಂಗ್ ಮಾಡ್ತಿದ್ದ. ದುಷ್ಯಂತ್‌ ಶರ್ಮಾಗೆ ಈಗಾಗಲೇ ಮದುವೆಯಾಗಿತ್ತು.

ಹೀಗೆ ಆನ್‌ಲೈನ್‌ನಲ್ಲೇ ಇವರಿಬ್ಬರ ಸಂಬಂಧ ಮುಂದುವರೆದಿತ್ತು. ಕೇವಲ 3 ತಿಂಗಳ ಕಾಲ ಆನ್‌ಲೈನ್‌ನಲ್ಲೇ ಡೇಟಿಂಗ್ ಮಾಡಿದ ಇವರಿಬ್ಬರೂ ಬಳಿಕ ಪರಸ್ಪರ ಭೇಟಿಯಾಗೋದಕ್ಕೆ ನಿರ್ಧಾರ ಮಾಡಿದ್ದರು.
ಜೈಪುರದಲ್ಲಿ ತನ್ನ ಬಾಡಿಗೆ ರೂಂ ಇದೆ. ಅಲ್ಲಿಗೆ ಬಾ ಅಂತ ಪ್ರಿಯಾ ಸೇಠ್ ಹೇಳಿದ್ದಳು. ಅದರಂತೆ ಆಕೆಯ ಭೇಟಿಗಾಗಿ ನವದೆಹಲಿಯಿಂದ ಜೈಪುರಕ್ಕೆ ದುಷ್ಯಂತ್ ಶರ್ಮಾ ಬಂದಿದ್ದ.

ಪ್ರಿಯಾ ಸೇಠ್ ಹೇಳಿದ ಅಡ್ರೆಸ್‌ನ ರೂಂಗೆ ದುಷ್ಯಂತ್ ಬರುತ್ತಿದ್ದಂತೆ ಅಲ್ಲಿ ಹೈಡ್ರಾಮಾನೇ ನಡೆಯಿತು. ಆತನ ಅಪಹರಣಕ್ಕೆ ಪ್ಲಾನ್ ಮಾಡಿದ್ದ ಪ್ರಿಯಾ ಸೇಠ್, ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಎಂಬ ತನ್ನ ಗೆಳೆಯರನ್ನು ಕರೆಸಿದ್ದಳು. ಮೂವರೂ ಸೇರಿ ಆತನನ್ನು ಕಿಡ್ನಾಪ್ ಮಾಡಿ, ಬೇರೆಡೆಗೆ ಕರೆದೊಯ್ದಿದ್ದರು.

ಆತನಿಗೆ ಹಿಂಸೆ ನೀಡಿದ ಪಾತಕಿಗಳು, ಆತನಿಂದಲೇ ತಂದೆ ರಾಮೇಶ್ವರ್ ಪ್ರಸಾದ್ ಶರ್ಮಾಗೆ ಕಾಲ್ ಮಾಡಿದ್ದಾರೆ. ಈ ವೇಳೆ ಆತ ಶ್ರೀಮಂತ ಉದ್ಯಮಿಯಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಪಾಪಾ, ಇವರು ನನ್ನನ್ನು ಕೊಲ್ಲುತ್ತಾರೆ, ಪ್ಲೀಸ್ ಬೇಗ 10 ಲಕ್ಷ ಕೊಟ್ಟು, ನನ್ನನ್ನು ಕರೆದುಕೊಂಡು ಹೋಗಿ ಅಂತ ದುಷ್ಯಂತ್ ಕಣ್ಣೀರು ಹಾಕಿದ್ದಾನೆ. ಅಷ್ಟರಲ್ಲಿ ಮೊಬೈಲ್ ಕಸಿದುಕೊಂಡ ಪ್ರಿಯಾ ಸೇಠ್, ಸಂಜೆಯೊಳಗೆ 10 ಲಕ್ಷ ಹಣ ಖಾತೆಗೆ ಹಾಕಲು ಹೇಳಿದ್ದಾಳೆ. ಆದರೆ ನನ್ನ ಬಳಿ 10 ಲಕ್ಷ ಹಣವಿಲ್ಲ, 3 ಲಕ್ಷ ಅಡ್ಜೆಸ್ಟ್ ಮಾಡಲು ಪ್ರಯತ್ನಿಸುತ್ತೇನೆ ಅಂತ ದುಷ್ಯಂತ್ ತಂದೆ ಹೇಳುತ್ತಿದ್ದಂತೆ ಈಕಡೆಯಿಂದ ಕಾಲ್ ಕಟ್ ಆಗಿದೆ. ಬಳಿಕ ಸಂಜೆ ದುಷ್ಯಂತ್ ಖಾತೆಗೆ ಅವರ ತಂದೆ ಹಣ ಹಾಕುತ್ತಿದ್ದಂತೆ ಆತನ ಡೆಬಿಟ್ ಕಾರ್ಡ್, ಪಿನ್ ನಂಬರ್ ಪಡೆದ ದುಷ್ಕರ್ಮಿಗಳು, ಆತನಿಗೆ ಮನಸ್ಸೋ ಇಚ್ಛೆ ಥಳಿಸಿ, ಆತನನ್ನು ಕೊಂದಿದ್ದಾರೆ. ಬಳಿಕ ಆತನ ಶವವನ್ನು ಸೂಟ್‌ಕೇಸ್‌ನಲ್ಲಿಟ್ಟು, ಹಳ್ಳಿಯಲ್ಲಿ ಎಸೆದು ಎಸ್ಕೇಪ್ ಆಗಿದ್ದರು. ವಿಷಯ ತಿಳಿದು ತನಿಖೆ ನಡೆಸಿದ ಪೊಲೀಸರು ಅವರನ್ನೆಲ್ಲ ಅರೆಸ್ಟ್ ಮಾಡಿದ್ದರು.

ಆರೋಪಿ ದೀಕ್ಷಾಂತ್ ಕಮ್ರಾ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಪ್ರಿಯಾ, ಆತನ 21 ಲಕ್ಷ ಸಾಲ ತೀರಿಸೋದಕ್ಕಾಗಿ ಅಪಹರಣದ ಪ್ಲಾನ್ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾಳೆ. ಇದೀಗ ವಿಚಾರಣೆ ನಡೆಸಿದ ಕೋರ್ಟ್, ಮೂವರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇತ್ತೀಚಿನ ಸುದ್ದಿ

Exit mobile version