4:10 PM Wednesday 10 - December 2025

ಬಾವನನ್ನು ಪಾರ್ಟಿಗೆ ಕರೆದ ಬಾಮೈದ ಗುಂಡಿಟ್ಟು ಕೊಂದ !

19/01/2021

ಹಾಸನ: ಹಾಸನ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಕೆಇಬಿ ನೌಕರ ಸಂತೋಷ್ ನ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು,  ಕೊಲೆಯಾದ ನೌಕರನ ಪತ್ನಿಯ ತಮ್ಮ ಸೇರಿದಂತೆ  ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಸಂತೋಷ್ ನ ಬಾಮೈದ ಆಲೂರು ತಾಲೂಕಿನ ಕೆ.ಹೊಸಕೋಟೆಯ ಸುದಿನ್ ಕುಮಾರ್ ಅಲಿಯಾಸ್ ಆದರ್ಶ್ ಮತ್ತು ಆತನ ಸ್ನೇಹಿತರಾದ ಮಡಿಕೇರಿಯ ಅನುಕೂಲ್, ಬಿ.ಎಸ್.ಸುರೇಶ್, ಎಚ್.ಬಿ.ಸತೀಶ್ ಬಂಧಿತ ಆರೋಪಿಗಳಾಗಿದ್ದಾರೆ.

ಸುದಿನ್ ನ ಅಕ್ಕ ಜಯಶ್ರೀಯನ್ನು  13 ವರ್ಷಗಳ ಹಿಂದೆ ಸಂತೋಷ್ ಪ್ರೀತಿಸಿ ಮದುವೆಯಾಗಿದ್ದ, ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಈತ ಕುಡಿದು ಬಂದು ದಿನನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ವಿಚಾರವಾಗಿ ಸಾಕಷ್ಟು ಬಾರಿ ರಾಜಿ ಸಂಧಾನ ನಡೆಸಿದ್ದರೂ ಆತ ಸರಿಯಾಗಿರಲಿಲ್ಲ.

ಒಂದು ವರ್ಷದಿಂದ ಕೆಲಸಕ್ಕೂ ಹೋಗದೇ ಮನೆಯಲ್ಲಿ ಉಳಿದುಕೊಂಡು ಅಕ್ಕನಿಗೆ ನಿರಂತರವಾಗಿ ಆತ ಕಿರುಕುಳ ನೀಡುತ್ತಿದ್ದ. ಅಕ್ಕನಿಗೆ ಹಿಂಸೆ ನೀಡುತ್ತಿರುವ ಆತನನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿದ ಸುದಿನ್, ತನ್ನ ಸ್ನೇಹಿತರೊಂದಿಗೆ ಸಂತೋಷ್ ನನ್ನು ಪಾರ್ಟಿಯ ನೆಪದಲ್ಲಿ ಹೂವಿನಹಳ್ಳಿ ಕಾವಲ್ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದು, ಅನುಕೂಲ್ ಎಂಬಾತ ಪಿಸ್ತೂಲ್ ನಿಂದ ಸಂತೋಷ್ ಮೇಲೆ 8 ಗುಂಡು ಹಾರಿಸಿದ್ದಾನೆ. ಇದರಲ್ಲಿ 5 ಗುಂಡುಗಳು ಸಂತೋಷ್ ನನ್ನು ತಾಗಿದ್ದು, ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸಂತೋಷ್ ಗೆ ಹೊರಗಡೆ ಯಾರೂ ಕೂಡ ಶತ್ರುಗಳಿಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಪೊಲೀಸರು, ಕುಟುಂಬಸ್ಥರ ಮೇಲೆ ಅನುಮಾನಪಟ್ಟಿದ್ದಾರೆ. ಈ ಅನುಮಾನ ನಿಜವಾಗಿದೆ. ಇದೀಗ ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ರಿವಾಲ್ವರ್, 29 ಸಜೀವ ಗುಂಡುಗಳು, 1 ಡಸ್ಟರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

Exit mobile version