10:49 AM Thursday 16 - October 2025

ಪ್ರಧಾನಿ ಮೋದಿ ಭೇಟಿಯ ಬೆನ್ನಲ್ಲೇ ಹೊತ್ತಿ ಉರಿದ ಬಾಂಗ್ಲಾದೇಶ!

bangladesha
28/03/2021

ಡಾಕಾ: ಬಾಂಗ್ಲಾದೇಶಕ್ಕೆ ಪ್ರಧಾನಿ ಮೋದಿ ಭೇಟಿಯ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ  ಹಿಂಸಾಚಾರ ಆರಂಭವಾಗಿದ್ದು, ಈವರೆಗೆ 10 ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.  ಭಾನುವಾರ ಪೂರ್ವ ಬಾಂಗ್ಲಾದೇಶದ ಹಿಂದೂ ದೇವಾಲಯಗಳು ಮತ್ತು ರೈಲಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯ ಪತ್ರಕರ್ತ ತಿಳಿಸಿದ್ದಾರೆ.

 ಮೋದಿ ಭೇಟಿಯ ವಿರುದ್ಧ ಇಸ್ಲಾಮಿಕ್ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಭಾರತದಲ್ಲಿ  ಮುಸ್ಲಿಮರು ಹಾಗೂ ಬಹುಸಂಖ್ಯಾತ ಹಿಂದುಗಳ ನಡುವೆ ನರೇಂದ್ರ ಮೋದಿ ತಾರತಮ್ಯ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ

 ಬಾಂಗ್ಲಾದೇಶದ 50 ನೇ ಸಂಸ್ಥಾಪನಾ ದಿನದಲ್ಲಿ ಭಾಗವಹಿಸಲು ನರೇಂದ್ರ ಮೋದಿ ಅವರು ಶುಕ್ರವಾರ ಡಾಕಾಕ್ಕೆ ಆಗಮಿಸಿದರು. ಬಾಂಗ್ಲಾದೇಶಕ್ಕೆ 12 ಲಕ್ಷ ಕೋವಿಡ್‌ ಲಸಿಕೆ ನೀಡುವುದಾಗಿ ಪ್ರಧಾನಿ ಶೇಖ್‌ ಹಸೀನಾ ಅವರಿಗೆ ಭರವಸೆ ನೀಡಿದ್ದ ನರೇಂದ್ರ ಮೋದಿ ಅವರು, ಶನಿವಾರ ಅಲ್ಲಿಂದ ನಿರ್ಗಮಿಸಿದ್ದರು. ಇದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಆರಂಭವಾಗಿದೆ.

ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದರಿಂದ ಡಾಕಾದಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದರು. ಇದಾದ ಮರುದಿನ ಇಸ್ಲಾಮಿಕ್‌ ಗುಂಪಿನ ಕಾರ್ಯಕರ್ತರು ಚಿತ್ತಗಾಂಗ್ ಮತ್ತು ಡಾಕಾದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಭಾನುವಾರ, ಹೆಫಜತ್-ಎ-ಇಸ್ಲಾಂ ಗುಂಪಿನ ಕಾರ್ಯಕರ್ತರು ಪೂರ್ವ ಬಾಂಗ್ಲಾದೇಶದ ಜಿಲ್ಲೆ ಬ್ರಹ್ಮನ್‌ಬರಿಯಾದಲ್ಲಿ ರೈಲಿನ ಮೇಲೆ ದಾಳಿ ನಡೆಸಿದರು, ಇದರಿಂದಾಗಿ ಹತ್ತು ಜನರು ಗಾಯಗೊಂಡರು. ಪ್ರತಿಭಟನಾಕಾರರು ರೈಲಿನ ಮೇಲೆ ದಾಳಿ ಮಾಡಿದರು. ಅದರ ಎಂಜಿನ್, ಬೋಗಿಗಳನ್ನು ಹಾನಿಗೊಳಿಸಿದ್ದರು.

‘ಬ್ರಹ್ಮನ್‌ಬರಿಯಾ ಹೊತ್ತಿ ಉರಿಯುತ್ತಿದೆ. ವಿವಿಧ ಸರ್ಕಾರಿ ಕಚೇರಿಗಳಿಗೆ ನಿರ್ದಾಕ್ಷಿಣ್ಯವಾಗಿ ಬೆಂಕಿ ಹಚ್ಚಲಾಗಿದೆ. ಪ್ರೆಸ್ ಕ್ಲಬ್‌ ನ ಮೇಲೂ ದಾಳಿ ನಡೆದಿದೆ. ಪ್ರೆಸ್ ಕ್ಲಬ್ ಅಧ್ಯಕ್ಷರು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ನಾವು ತೀವ್ರ ಭಯದಲ್ಲಿದ್ದೇವೆ, ಅಸಹಾಯಕರಾಗಿದ್ದೇವೆ. ಪಟ್ಟಣದ ಹಲವಾರು ಹಿಂದೂ ದೇವಾಲಯಗಳ ಮೇಲೂ ದಾಳಿ ನಡೆಸಲಾಗಿದೆ’ ಎಂದು ಬ್ರಹ್ಮನ್‌ಬರಿಯಾ ಪಟ್ಟಣದ ಪತ್ರಕರ್ತ ಜಾವೇದ್ ರಹೀಮ್  ತಿಳಿಸಿದ್ದಾರೆ.

ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಬಂದೂಕು ಪ್ರಯೋಗಿಸಿರುವುದರಿಂದ ಜನರು ಕೆರಳಿದ್ದು, ಇವೆಲ್ಲದಕ್ಕೂ ಪೊಲೀಸರ ನಡೆಯೇ ಕಾರಣ ಎಂದು ಹೇಳಲಾಗಿದೆ. ಪೊಲೀಸರು ಹಿಂಸಾಚಾರದ ಕ್ರಮಕೈಗೊಂಡಿದ್ದರಿಂದ ಬಾಂಗ್ಲಾದೇಶದಲ್ಲಿ ಮತ್ತಷ್ಟು ಆಕ್ರೋಶ ಆರಂಭವಾಗಿದೆ ಎಂದು ಹೇಳಲಾಗಿದೆ.

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ಹೋಗಿದ್ದೆ | ಪ್ರಧಾನಿ ಮೋದಿ ಹೇಳಿಕೆ

ಇತ್ತೀಚಿನ ಸುದ್ದಿ

Exit mobile version