11:04 AM Saturday 23 - August 2025

ಮಂಗಳೂರಿನ ರಾಗಿಂಗ್ ಪ್ರಕರಣ ಎಚ್ಚರಿಕೆಯ ಕರೆಗಂಟೆ: ಜಾಗೃತಿ ಮೂಡಿಸಲು ಎಸ್ ಎಫ್ ಐ ಮನವಿ

16/02/2021

ಮಂಗಳೂರು: ಇತ್ತೀಚೆಗೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿಗಳಲ್ಲಿ ರಾಗಿಂಗ್ ಪ್ರಕರಣ ದಾಖಲಾಗಿದ್ದು ರಾಗಿಂಗ್ ನಡೆಸಿದ ವಿದ್ಯಾರ್ಥಿಗಳ ಬಂಧನವಾಗಿದೆ. ಈ ರಾಗಿಂಗ್ ಪ್ರಕರಣವು ಜಿಲ್ಲಾಡಳಿತ ಹಾಗೂ ರಾಗಿಂಗ್ ನಡೆಸುವ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಕರೆಗಂಟೆ ನೀಡಿದೆಯಾದರೂ, ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಹೊರ ರಾಜ್ಯ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ನಗರದ ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಾರೆ. ಈ ವಿದ್ಯಾರ್ಥಿಗಳು ತಮ್ಮ ಹೆತ್ತವರಿಂದ ದೂರವಿದ್ದು ನಗರದಲ್ಲೇ ಹಾಸ್ಟೇಲುಗಳಲ್ಲಿ ನೆಲೆಸಿ ವಿದ್ಯಾರ್ಜನೆ ಮಾಡುತ್ತಾರೆ. ರಾಗಿಂಗ್ ಪ್ರಕರಣವು ಇಂತಹ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ  ಭಯದ ವಾತಾವರಣ ನಿರ್ಮಿಸಿದೆ ಎಂದು ಎಸ್ ಎಫ್ ಐ ತಿಳಿಸಿದೆ.

ಜಿ‌ಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿ  ರಾಗಿಂಗ್ ಮುಕ್ತ ಸಮಿತಿಯಿದೆಯಾದರೂ ಕೇವಲ ಹೆಸರಿಗೆ ಮಾತ್ರ ಇರುವಂತಾಗಿದೆ. ಇನ್ನೂ ಕೆಲವು ಶಾಲಾ-ಕಾಲೇಜುಗಳಲ್ಲಿ ರಾಗಿಂಗ್ ಮುಕ್ತ ಸಮಿತಿಯೇ ರಚನೆಯಾಗಿಲ್ಲ. ವಿದ್ಯಾಸಂಸ್ಥೆಗಳಲ್ಲಿ ರಾಗಿಂಗ್ ಮೊದಲಾದ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳು ನಡೆಯದಂತೆ ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸಬೇಕಾಗಿದೆ. ಯಾವುದೇ ವಿದ್ಯಾರ್ಥಿಗಳು ಕಿರುಕುಳವನ್ನು ಎದುರಿಸುತ್ತಿದ್ದರೆ ಆತಂಕಕ್ಕೆ ಒಳಪಡದೆ, ತಮ್ಮ ವಿದ್ಯಾಸಂಸ್ಥೆಯ ಸಂಬಂಧ ಪಟ್ಟ ಸಮಿತಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ದೈರ್ಯ ತುಂಬುವಂಥಹ ಕಾರ್ಯವನ್ನು ಸಮಿತಿಯು ನಿರ್ವಹಿಸಬೇಕು. ವಿದ್ಯಾರ್ಥಿಗಳ ನಡುವೆ ಭಯಮುಕ್ತ ವಾತಾವರಣ ಸೃಷ್ಟಿಸುವಲ್ಲಿ ವಿದ್ಯಾಸಂಸ್ಥೆಯು ಬದ್ಧರಾಗಿರಬೇಕು ಎಂದು ಎಸ್ ಎಫ್ ಐ ಮುಖಂಡರು ತಿಳಿಸಿದರು.

ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಹಾಗೂ ಹಾಸ್ಟೇಲುಗಳಲ್ಲಿ ರಾಗಿಂಗ್ ತಡೆ ಸಮಿತಿಯು ರಚಿಸಿ ರಾಗಿಂಗ್ ಹಾಗೂ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಶಾಲಾ-ಕಾಲೇಜುಗಳಲ್ಲಿ ಈ ಸಮಿತಿ ರಚಿಸಲಾಗಿದೆಯೇ ಹಾಗೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಬೇಕು. ಹಾಗೆಯೇ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಪೊಲೀಸ್‌ ಇಲಾಖೆಯು ರಾಗಿಂಗ್ ಮುಕ್ತ ಅಭಿಯಾನವನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ, ರೂಪಾ ಜೆ. ಎಂ. ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮನವಿ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್ ಎಫ್ಐ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್, ಜಿಲ್ಲಾ ಪದಾಧಿಕಾರಿಗಳಾದ ಸಿನಾನ್ ಬೆಂಗ್ರೆ, ಶಮಾಝ್ ಕೆ. ಸಿ. ರೋಡ್, ಜಿಲ್ಲಾ ನಾಯಕರಾದ ತಿಲಕ್ ಕುತ್ತಾರ್, ವಿನೀತ್ ದೇವಾಡಿಗ, ಸಲೋನಿ ಬೋಳಾರ್, ಸಫ್ವಾನ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

Exit mobile version