11:50 PM Saturday 23 - August 2025

 ಸರ್ಕಾರ ಸೌಲಭ್ಯಗಳನ್ನು ಕಲ್ಪಿಸುವವರೆಗೂ  ಪೊಲೀಸರು ತೃತೀಯಲಿಂಗಿಗಳ ವಿರುದ್ಧ ಕ್ರಮಕೈಗೊಳ್ಳಬಾರದು: ಮಂಜಮ್ಮ ಜೋಗತಿ

manjamma jogatti
04/09/2023

ಉಡುಪಿ: ತೃತೀಯ ಲಿಂಗಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಅಗತ್ಯ. ಸೂಕ್ತ ಅವಕಾಶಗಳು ಸಿಗದಿದ್ದರೆ ಅವರ ಪ್ರತ್ಯೇಕತೆ ಹೀಗೆ ಮುಂದುವರಿಯುತ್ತದೆ. ಈ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸುವವರೆಗೂ ಪೊಲೀಸರು ತೃತೀಯಲಿಂಗಿಗಳ ವಿರುದ್ಧ ಕ್ರಮಕೈಗೊಳ್ಳಬಾರದು ಎಂದು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಅಜ್ಜರಕಾಡಿನ ಜಿಲ್ಲಾ ಗ್ರಂಥಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಜಿಲ್ಲಾ ಗ್ರಂಥಾಲಯ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ತೃತೀಯ ಲಿಂಗಿಗಳು ಅನಿವಾರ್ಯ ಪರಿಸ್ಥಿತಿಯಲ್ಲಿ ಬೇಡುವ ಕಾಯಕ ಹಾಗೂ ಲೈಂಗಿಕ ಕಾರ್ಯಕರ್ತರಾಗಿದ್ದಾರೆ. ಹೀಗಾಗಿ ಅವರ ಅನ್ನವನ್ನು ಅವರೇ ಗಳಿಸುವಂತೆ ಮಾಡುವುದು ಸಮಾಜದ ಜವಾಬ್ದಾರಿ. ಇತ್ತೀಚಿನ ದಿನಗಳಲ್ಲಿ ತೃತೀಯ ಲಿಂಗಿಗಳ ಬಗ್ಗೆ ಸಮಾಜದ ಧೋರಣೆ ನಿಧಾನಕ್ಕೆ ಬದಲಾಗುತ್ತಿದ್ದು, ಬೆಂಗಳೂರಿನ ಐಟಿ&ಬಿಟಿ ಕಂಪೆನಿಗಳಲ್ಲೂ ಕೆಲವರು ಉದ್ಯೋಗ ಪಡೆದಿದ್ದಾರೆ ಎಂದರು.

ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್​ ಸಾಮಗ, ಕಲಾವಿದ ಡಾ. ಸುರೇಶ್​ ಶೆಣೈ, ಕವಯತ್ರಿ ಜ್ಯೋತಿ ಮಹಾದೇವ್​, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಸಂವಾದ ನಡೆಸಿಕೊಟ್ಟರು.  ಗ್ರಂಥಾಲಯ ಮುಖ್ಯ ಗ್ರಂಥಾಧಿಕಾರಿ ಜಯಶ್ರೀ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್​ ಶೆಣೈ, ಅಧ್ಯಕ್ಷ ಪ್ರೊ. ಶಂಕರ್​, ತುಳುಕುಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ , ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ. ಹರೀಶ್ಚಂದ್ರ, ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ, ಉಪಸ್ಥಿತರಿದ್ದರು.

ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಸಂವಾದ ನಿರೂಪಣೆಯನ್ನು ಅವಿನಾಶ್ ಕಾಮತ್ ನೆರೆವೇರಿಸಿದರು. ಶಿಲ್ಪಾ  ಜೋಶಿ ನಿರೂಪಿಸಿದರು. ಸಂಧ್ಯಾ ಶೆಣೈ ಧನ್ಯವಾದವಿತ್ತರು.

ಇತ್ತೀಚಿನ ಸುದ್ದಿ

Exit mobile version