ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಪೃಥ್ವಿ ರೆಡ್ಡಿ ಪತ್ರ: ದೆಹಲಿಗೆ ತೆರಳಿ ಅಧ್ಯಯನ ಮಾಡುವಂತೆ ಆಹ್ವಾನ

amadmi party 1
20/05/2023

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಪತ್ರ ಬರೆದಿದ್ದು, ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿ ಎಎಪಿ ಆಡಳಿತವಿರುವ ದೆಹಲಿಗೆ ತೆರಳಿ ಅಧ್ಯಯನ ನಡೆಸುವಂತೆ ಆಹ್ವಾನ ನೀಡಿದ್ದಾರೆ.

ಸಿಎಂ ಮತ್ತು ಡಿಸಿಎಂಗೆ ಅಭಿನಂದನೆ ಸಲ್ಲಿಸಿ ಶನಿವಾರ ಬರೆದ ಪ್ರತ್ಯೇಕ ಪತ್ರಗಳಲ್ಲಿ ಪೃಥ್ವಿ ರೆಡ್ಡಿ, “ಭ್ರಷ್ಟಾಚಾರ ಮತ್ತು ವಿಭಜನೆಯ ರಾಜಕಾರಣವನ್ನು ಕರ್ನಾಟಕ ಜನತೆ ತಿರಸ್ಕರಿಸಿದ್ದಾರೆ. ಸಾಕಷ್ಟು ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳೊಂದಿಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿಮಗೆ ವಹಿಸಿದ್ದಾರೆ. ಆಮ್‌ ಆದ್ಮಿ ಪಾರ್ಟಿಯು ವಿದ್ಯುತ್‌, ನೀರು, ಯುವಜನ ಕಲ್ಯಾಣ, ಮಹಿಳಾ ಸಬಲೀಕರಣ ಯೋಜನೆಗಳನ್ನು ಪರಿಚಯಿಸಿದಾಗ, ಹಾಗೂ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಾಗ “ಅವುಗಳನ್ನು ಹೇಗೆ ನಿಭಾಯಿಸಲು ಸಾಧ್ಯ?” ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಇಂದು ಎಎಪಿ ಆಡಳಿತ ಮಾದರಿಯು ದೆಹಲಿ ಹಾಗೂ ಪಂಜಾಬ್‌ನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದು ಮಾತ್ರವಲ್ಲದೇ ಇತರೆ ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳು ಅವುಗಳನ್ನು ಅನುಕರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ” ಎಂದು ಹೇಳಿದ್ದಾರೆ.

“ಆಮ್‌ ಆದ್ಮಿ ಪಾರ್ಟಿಯ ಕಲ್ಯಾಣ ಯೋಜನೆಗಳಾದ ಉಚಿತ ವಿದ್ಯುತ್‌, ಉಚಿತ ಬಸ್‌ ಪ್ರಯಾಣ, ಮಹಿಳೆಯರಿಗೆ ಆರ್ಥಿಕ ನೆರವು ಮತ್ತು ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಗಳನ್ನು ಕಾಂಗ್ರೆಸ್‌ ಪಕ್ಷವು ಭರವಸೆಯಾಗಿ ನೀಡಿತ್ತು. ಇದಕ್ಕೆ ಕರ್ನಾಟಕದ ಜನತೆಯಿಂದ ಅಗಾಧ ಬೆಂಬಲ ಸಿಕ್ಕಿರುವುದು ನಮಗೆ ಸಂತೋಷ ತಂದಿದೆ. ನಮ್ಮ ರಾಜ್ಯದ ಜನರ ಹಿತದೃಷ್ಟಿಯಿಂದ ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ನಮಗಿರುವ ಅನಭವಗಳು ಮತ್ತು ಜ್ಞಾನವನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ. ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ನಾವು ಮಾಡಿರುವ ಸುಧಾರಣೆಗಳನ್ನು ಅಧ್ಯಯನ ಮಾಡಲು ನಾವು ನಿಮ್ಮನ್ನು ದೆಹಲಿಗೆ ಆಹ್ವಾನಿಸುತ್ತಿದ್ದೇವೆ. ಆ ಸುಧಾರಣೆಗಳನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಬೇಕೆಂದು ನಾವು ಮನವಿ ಮಾಡುತ್ತೇವೆ” ಎಂದು ಪತ್ರದಲ್ಲಿ ಪೃಥ್ವಿ ರೆಡ್ಡಿ ಹೇಳಿದ್ದಾರೆ.

“ಕರ್ನಾಟಕದ ಜನರ ಹಿತಾಸಕ್ತಿಗಾಗಿ ನೂತನ ಸರ್ಕಾರಕ್ಕೆ ಆಮ್‌ ಆದ್ಮಿ ಪಾರ್ಟಿಯು ರಚನಾತ್ಮಕವಾಗಿ ಸಹಕಾರ ನೀಡಲಿದೆ. ಎಲ್ಲ ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿ ಸರ್ಕಾರದ ಕ್ರಮಗಳ ಮೇಲೆ ನಾವು ಸೂಕ್ಷ್ಮವಾಗಿ ಗಮನ ಇಡಲಿದ್ದೇವೆ” ಎಂದು ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version