ಸುಳ್ಯ: ಸ್ಮಶಾನ ಜಾಗ ಉಳಿಸಲು ಒತ್ತಾಯಿಸಿ ಗ್ರಾಮ ಸಭೆಯಲ್ಲೇ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಲ್ಲಗುಡ್ಡೆಯಲ್ಲಿ ಸ್ಮಶಾನ ಜಾಗ ಆವರಿಸಿ, ಸುಳ್ಯ ನಗರ ಪಂಚಾಯತ್ ಗೆ ಒಂದು ಎಕ್ರೆ ಜಾಗ ಘನತ್ಯಾಜ್ಯ ವಿಲೇವಾರಿಗೆಂದು ಕಾದಿರಿಸಲಾಗಿದೆ.
ಆ ಜಾಗವನ್ನು ಅಜ್ಜಾವರ ಪಂಚಾಯತ್ ಸುಪರ್ದಿಯಲ್ಲಿ ಸ್ಮಶಾನಕ್ಕೆ ಕಾದಿರಿಸಬೇಕು, ಈ ಕುರಿತು ಸಭೆಯಲ್ಲಿ ನಿರ್ಣಯ ಬರೆಯಬೇಕೆಂದು ಆಗ್ರಹಿಸಿದ ಗ್ರಾಮಸ್ಥರು ಕೆಲ ಹೊತ್ತು ಪ್ರತಿಭಟನೆ ನಡೆಸಿದ ಘಟನೆ ನಡೆಸಿದ್ದು, ಪಂಚಾಯತ್ ಸದಸ್ಯರ ಲಿಖಿತ ಹೇಳಿಕೆಯ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಅಜ್ಜಾವರ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಬೇಬಿ ಕಡ್ಕರ ಅಧ್ಯಕ್ಷತೆಯಲ್ಲಿ ಮೇನಾಲ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ಸದಸ್ಯರುಗಳಾದ ಪ್ರಸಾದ್ಕುಮಾರ್ ಮೇನಾಲ, ರವಿರಾಜ್ ಕರ್ಲಪ್ಪಾಡಿ, ದಿವ್ಯ ಪಡ್ಡಂಬೈಲು, ಅಬ್ದುಲ್ಲ ಅಜ್ಜಾವರ, ಶ್ವೇತ ಶಿರಾಜೆ, ವಿಶ್ವನಾಥ ಮುಳ್ಯ ಮಠ, ರಾಹುಲ್ ಅಡಂಗಾಯ, ಸತ್ಯವತಿ ಬಸವನಪಾದೆ, ವಿಶ್ವನಾಥ, ರಾಘವ, ಶಿವಕುಮಾರ, ಲೀಲಾ ಮನಮೋಹನ, ಪಿಡಿಒ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ನೋಡೆಲ್ ಅಧಿಕಾರಿಯಾಗಿದ್ದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹರೀಶ್ ಮೇನಾಲರು, ಕಲ್ಲಗುಡ್ಡೆ ಸ್ಮಶಾನ ಜಾಗಕ್ಕೆ ಬೇಲಿ ಯಾಕೆ ಹಾಕಿಲ್ಲ. ಈ ಹಿಂದಿನ ಗ್ರಾಮ ಸಭೆಯಲ್ಲಿಯೂ ನಾವು ಪ್ರಸ್ತಾಪಿಸಿದ್ದೆವು. ಆಗ ಚಂದ್ರಶೇಖರ ಪಲ್ಲತಡ್ಕರು, ಕಲ್ಲಗುಡ್ಡೆಯಲ್ಲಿ ಸ್ಮಶಾನ ಜಾಗವನ್ನು ವ್ಯವಸ್ಥಿತ ರೀತಿಯಲ್ಲಿ ಇಡಬೇಕು. ಇಲ್ಲಿಯ ಸುತ್ತ ಮುತ್ತ ನಿಧನರಾದರೆ ಅದೊಂದೇ ಸ್ಮಶಾನ ಇರುವುದು.
ಅದೇ ಜಾಗವನ್ನು ಬಳಸಿಕೊಂಡು ಸುಳ್ಯ ನಗರ ಪಂಚಾಯತ್ ಗೆ ಘನತ್ಯಾಜ್ಯಕ್ಕೆ ಆಗಿದೆಯಂತೆ ಏನದು ಎಂದು ಕೇಳಿದರು. ಸತೀಶ್ ಬೂಡುಮಕ್ಕಿ, ರಂಜಿತ್ ರೈ ಮೇನಾಲ, ಸೌಕತ್ ಅಲಿ, ದಾಸಪ್ಪ ಮೇನಾಲ, ಗಂಗಾಧರ್ ಮೇನಾಲ ಮೊದಲಾದವರು ಧ್ವನಿಗೂಡಿಸಿ ಮಾತನಾಡಿದರು. ನಗರ ಪಂಚಾಯತ್ ಗೆ ಅಲ್ಲಿ ಒಂದು ಎಕ್ರೆ ಜಾಗ ಆರ್.ಟಿ.ಸಿ. ಇದೆ. ಅದರ ಸರ್ವೆ ಮಾಡಲಿದ್ದೇವೆ ಬನ್ನಿ ಎಂದು ಇತ್ತೀಚೆಗೆ ಸರ್ವೆಯರ್ ಫೋನ್ ಮಾಡಿದ್ದರು. ಆದರೆ ನಾವು ಹೋಗಿಲ್ಲ. ಬಳಿಕ ಸರ್ವೆಯರ್ ಹಿಂತಿರುಗಿದ್ದಾರೆ ಎಂದು ಪಿಡಿಒ ಹೇಳಿದರು. ಸದಸ್ಯ ಪ್ರಸಾದ್ ರೈಯವರು ಕೂಡಾ, ಸ್ಮಶಾನಕ್ಕೆ ಅದೊಂದೇ ಜಾಗ. ಅದನ್ನು ಉಳಿಸಬೇಕು” ಎಂದು ಹೇಳಿದರು.
“ನಗರ ಪಂಚಾಯತ್ ಗೆ ಆ ಜಾಗವನ್ನು ಕಾದಿರಿಸಿದ್ದು ಯಾರು? ಅದು ಗೊತ್ತಾಗಬೇಕು. ನಮ್ಮ ಗ್ರಾಮದಲ್ಲೇ ನಮಗೆ ಜಾಗ ಇಲ್ಲ. ನಗರದವರಿಗೆ ಹೇಗೆ ಇಲ್ಲಿ ಕೊಡೋದು. ಅದನ್ನು ಉಳಿಸಬೇಕು ಈ ಕುರಿತು ನಿರ್ಣಯ ಮಾಡಿ, ನಮಗೆ ಲಿಖಿತ ಹೇಳಿಕೆ ನೀಡಿ ಎಂದು ಚಂದ್ರಶೇಖರ ಪಲ್ಲತಡ್ಕ ಒತ್ತಾಯಿಸಿದರು.
ಕೆಲ ಹೊತ್ತು ಈ ಕುರಿತು ಅಭಿಪ್ರಾಯಗಳನ್ನು ಪ್ರತಿಯೊಬ್ಬರು ಹೇಳತೊಡಗಿದರು. ಚಂದ್ರಶೇಖರ ಪಲ್ಲತಡ್ಕ ಹಾಗೂ ಇತರರು ನಮಗೆ ಲಿಖಿತ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ, ಸಭೆಯ ಮುಂಭಾಗ ನೆಲದಲ್ಲಿ ಕುಳಿತು ಪ್ರತಿಭಟಿಸ ತೊಡಗಿದರು.
ಬಳಿಕ ಆ ಜಾಗ ಪಂಚಾಯತ್ ಗೆ ಅಗತ್ಯತೆ ಯ ಕುರಿತು ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಬರೆಯುವ ಕುರಿತು ಲಿಖಿತ ಹೇಳಿಕೆ ನೀಡಿ, ಸದಸ್ಯರೆಲ್ಲರೂ ಸಹಿ ಮಾಡಿದ ಪ್ರತಿಯನ್ನು ಚಂದ್ರಶೇಖರ ಪಲ್ಲತಡ್ಕ ಮತ್ತು ತಂಡದವರಿಗೆ ನೀಡಲಾಯಿತು. ನಂತರದಲ್ಲಿ ಗ್ರಾಮ ಸಭೆ ಸುಗಮವಾಗಿ ಮುಂದುವರಿಯಿತು.