ಜ್ಞಾನವಾಪಿ ಮಸೀದಿ ವಿವಾದ ಪ್ರಕರಣ: ಮಸೀದಿ ಕಮಿಟಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸದ ಕೋರ್ಟ್

ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಿರ್ವಹಿಸಲು ನೀಡಿರುವ ಅನುಮತಿಗೆ ತಡೆ ಹೇರಬೇಕು ಎಂದು ಮಸೀದಿ ಕಮಿಟಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆಗೆ ಪರಿಗಣಿಸಿಲ್ಲ. ವಾರಣಾಸಿ ನ್ಯಾಯಾಲಯ ನೀಡಿರುವ ತೀರ್ಪಿಗೆ ತಾತ್ಕಾಲಿಕ ತಡೆ ನೀಡಬೇಕು ಎಂದು ಮಸೀದಿ ಕಮಿಟಿ ನ್ಯಾಯಾಲಯವನ್ನು ಕೋರಿಕೊಂಡಿತ್ತು.
ಆರಾಧನಾಲಯ ಸಂರಕ್ಷಣಾ ಕಾಯ್ದೆ ಅಸ್ತಿತ್ವದಲ್ಲಿರುವಂತೆಯೇ ಕೋರ್ಟ್ ನೀಡಿರುವ ಈ ತೀರ್ಪು ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಜ್ಞಾನವಾಪಿ ಮಸೀದಿಯ ಸೂಚನಾ ಫಲಕದಲ್ಲಿದ್ದ ಹೆಸರಿಗೆ ಸ್ಟಿಕ್ಕರ್ ಅಂಟಿಸಿ ಮರೆಮಾಚಲಾದ ಘಟನೆ ಕೂಡ ನಡೆದಿತ್ತು. ಇದನ್ನು ಆ ಬಳಿಕ ಪೊಲೀಸರು ತೆರವುಗೊಳಿಸಿದ್ದಾರೆ. ರಾಷ್ಟ್ರೀಯ ಹಿಂದೂ ದಲ್ ಕಾರ್ಯಕರ್ತರು ಈ ಕುಕೃತ್ಯ ನಡೆಸಿದ್ದರು.
ಇದೇ ವೇಳೆ ಆ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. ಹಾಗೆಯೇ ಫೆಬ್ರವರಿ ಆರರ ಒಳಗೆ ಪರಿಷ್ಕೃತ ಅರ್ಜಿ ಸಲ್ಲಿಸುವಂತೆ ಮಸೀದಿ ಕಮಿಟಿಗೆ ಹೈಕೋರ್ಟ್ ಸೂಚನೆ ನೀಡಿದೆ. 1993ರಲ್ಲಿ ಬಾಗಿಲು ಹಾಕಿ ಅದಕ್ಕೆ ಸೀಲ್ ಕೂಡ ಹಾಕಲಾದ ನೆಲ ಅಂತಸ್ತನ್ನು ಪೂಜೆಗೆ ಬಿಟ್ಟುಕೊಡುವಂತೆ ವಾರಣಾಸಿ ನ್ಯಾಯಾಲಯ ಕಳೆದ ವಾರ ಆದೇಶಿಸಿತ್ತು.