ಅಚ್ಚರಿಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ ಪಂಜಾಬ್ ರಾಜ್ಯಪಾಲ: ವೈಯಕ್ತಿಕ ಕಾರಣ ರಿಸೈನ್ ಗೆ ಕಾರಣನಾ..?

03/02/2024

ವೈಯಕ್ತಿಕ ಕಾರಣಗಳನ್ನು ನೀಡಿದ ಪಂಜಾಬ್ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವ ಅವರು, ಪಂಜಾಬ್ ಹಾಗೂ ಚಂಡೀಗಢದ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಆಗಸ್ಟ್ 2021ರಲ್ಲಿ ಬನ್ವಾರಿಲಾಲ್ ಪುರೋಹಿತ್ ಪಂಜಾಬ್ ನ 36ನೇ ರಾಜ್ಯಪಾಲರಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಬಾಕಿ ಇರುವ ಬಿಲ್‌ಗಳನ್ನು ಅನುಮೋದಿಸುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಬಿಕ್ಕಟ್ಟಿನ ಮಧ್ಯೆ ಪುರೋಹಿತ್ ಅವರು ಇದೀಗ ರಾಜೀನಾಮೆ ನೀಡಿದ್ದಾರೆ.

2023ರ ನವೆಂಬರ್ ನಲ್ಲಿ ಪಂಜಾಬ್ ಅಸೆಂಬ್ಲಿ ಅಂಗೀಕರಿಸಿದ ಐದು ಮಸೂದೆಗಳಿಗೆ ಸಮ್ಮತಿ ನೀಡುವಲ್ಲಿ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಪುರೋಹಿತ್ ಅವರನ್ನು ತರಾಟೆಗೆ ತೆಗೆದುಕೊಂಡಿತು. ವಿಚಾರಣೆಯ ಸಂದರ್ಭದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ರಾಜ್ಯಪಾಲರ ವಿರುದ್ಧ ಪಂಜಾಬ್ ಸರ್ಕಾರದ ಮನವಿಯನ್ನು ಆಲಿಸಿತು. ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಶಾಸಕಾಂಗ ಮಸೂದೆಗಳ ಜಾರಿಯನ್ನು ತಡೆಯಲು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.

ಬನ್ವಾರಿಲಾಲ್ ಪುರೋಹಿತ್ ಅವರು ಮೂರು ಬಾರಿ ಲೋಕಸಭಾ ಸಂಸದರಾಗಿದ್ದರು. ಜೊತೆಗೆ ಮಧ್ಯ ಭಾರತದ ಅತ್ಯಂತ ಹಳೆಯ ಇಂಗ್ಲಿಷ್ ದಿನಪತ್ರಿಕೆ ‘ದಿ ಹಿತವಾದ್’ ನ ವ್ಯವಸ್ಥಾಪಕ ಸಂಪಾದಕರೂ ಆಗಿ ಕಾರ್ಯನಿರ್ವಹಿಸಿದ್ದರು.

ಇತ್ತೀಚಿನ ಸುದ್ದಿ

Exit mobile version