ರಾಗಿ ಮುದ್ದೆ ಕೇವಲ ಆಹಾರವಲ್ಲ, ಅದೊಂದು ಶಕ್ತಿ; ದೇವೇಗೌಡರು ಇದನ್ನು ಫೇಮಸ್ ಮಾಡಿದರು: ಮಂಡ್ಯದಲ್ಲಿ ಪ್ರಧಾನಿ ಮೋದಿ
ಮಂಡ್ಯ: “ರಾಗಿ ಮುದ್ದೆ ಎನ್ನುವುದು ಕೇವಲ ಆಹಾರವಲ್ಲ, ಅದೊಂದು ಶಕ್ತಿ. ಮಂಡ್ಯದ ಮಣ್ಣಿನ ಈ ವಿಶಿಷ್ಟ ಆಹಾರವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಜಗತ್ಪ್ರಸಿದ್ಧಗೊಳಿಸಿದ್ದಾರೆ,” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಬುಧವಾರ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.
ಹೆಚ್.ಡಿ. ದೇವೇಗೌಡರು ರಾಗಿ ಮುದ್ದೆಯ ಮಹತ್ವವನ್ನು ದೇಶಕ್ಕೆ ಪರಿಚಯಿಸಿದರು. ಇಂದಿನ ಯುವ ಪೀಳಿಗೆ ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದರು.
ಕರ್ನಾಟಕಕ್ಕೆ ಬರುವುದೆಂದರೆ ನನಗೆ ಯಾವಾಗಲೂ ಖುಷಿ ಮತ್ತು ಹೊಸ ಪ್ರೇರಣೆ ಸಿಗುತ್ತದೆ. ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಈ ಭೇಟಿಯನ್ನು ಮತ್ತಷ್ಟು ಮಹತ್ವಪೂರ್ಣವಾಗಿಸಿದೆ ಎಂದರು.
ಆದಿಚುಂಚನಗಿರಿ ಮಠವು ಕಳೆದ ಎರಡು ಸಾವಿರ ವರ್ಷಗಳಿಂದ ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ. ಈ ಮಣ್ಣಿನಲ್ಲಿ ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡೂ ಮೇಳೈಸಿದೆ ಎಂದು ಮೋದಿ ಹೇಳಿದರು.
ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರು ಕೇವಲ ಸಂತರಾಗಿರಲಿಲ್ಲ, ಸಮಾಜದ ಬಂಧುವಾಗಿದ್ದರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮೂಲಕ ಬಡ ಮಕ್ಕಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣ ಸಿಗುವಂತೆ ಮಾಡಿದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿಯವರು ಜನತೆಗೆ ಒಂಬತ್ತು ಸಂಕಲ್ಪಗಳನ್ನು ಮಾಡುವಂತೆ ಮನವಿ ಮಾಡಿದರು. ಅದರಲ್ಲಿ ಮುಖ್ಯವಾಗಿ ದೇಶೀಯ ಪ್ರವಾಸೋದ್ಯಮ, ಸ್ವಚ್ಛತೆ, ಯೋಗ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























