ರಾಯಗಢದ ಔಷಧಿ ಕಂಪನಿಯಲ್ಲಿ ದಿಢೀರ್ ಸ್ಫೋಟ: 4 ಸಾವು; ದುರಂತದ ಮಧ್ಯೆ ಅನೇಕ ಕಾರ್ಮಿಕರು ಕಾಣೆ

ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮಹದ್ ಎಂಐಡಿಸಿ ಪ್ರದೇಶದಲ್ಲಿರುವ ಬ್ಲೂ ಜೆಟ್ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿಯ ಆವರಣದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮವಾಗಿ ಔಷಧೀಯ ಕಂಪನಿಗೆ ವಿನಾಶಕಾರಿ ಬೆಂಕಿ ಆವರಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ.
ಈ ಸ್ಥಳದಲ್ಲಿ ಸಂಗ್ರಹಿಸಿದ ರಾಸಾಯನಿಕಗಳಿಂದಾಗಿ ಸರಣಿ ಸ್ಫೋಟಗಳಿಗೆ ಕಾರಣವಾಯಿತು. ಇನ್ನು ಈ ಘಟನೆಯಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಕನಿಷ್ಠ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತವೆಂದರೆ, ಪ್ರಸ್ತುತ 11 ಕಾರ್ಮಿಕರು ಕಾಣೆಯಾಗಿದ್ದಾರೆ. ಇದು ಸಂಭಾವ್ಯ ಸಾವುನೋವುಗಳ ಭಯವನ್ನು ಹೆಚ್ಚಿಸಿದೆ.
ಬ್ಲೂ ಜೆಟ್ ಹೆಲ್ತ್ ಕೇರ್ ಕಂಪನಿಯಲ್ಲಿ ಇದ್ದಕ್ಕಿದ್ದಂತೆ ಬೃಹತ್ ಸ್ಫೋಟ ಸಂಭವಿಸಿತು. ನಂತರ ತೀವ್ರವಾದ ಬೆಂಕಿಯು ಆವರಣದಾದ್ಯಂತ ವೇಗವಾಗಿ ಹರಡಿತು. ಬೆಂಕಿಯ ತೀವ್ರತೆಯಿಂದಾಗಿ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ರಾಸಾಯನಿಕಗಳನ್ನು ಹೊಂದಿರುವ ಬ್ಯಾರೆಲ್ ಗಳು ಸ್ಫೋಟಗೊಂಡಿವೆ. ಸ್ಫೋಟ ಮತ್ತು ಬೆಂಕಿಯ ನರ್ತನವು ರಕ್ಷಣಾ ತಂಡಗಳಿಗೆ ಅಪಾರ ಸವಾಲುಗಳನ್ನು ಒಡ್ಡಿತು. ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳಿಗೆ ಅಡ್ಡಿಯಾಯಿತು.
ವರದಿಗಳ ಪ್ರಕಾರ, ಸ್ಫೋಟದ ಸಮಯದಲ್ಲಿ ನಾಲ್ಕು ಕಾರ್ಮಿಕರು ಪ್ರಾಣ ಕಳೆದುಕೊಂಡರು. ಗಾಯಗೊಂಡ ಮೂವರು ಕಾರ್ಮಿಕರು ಪ್ರಸ್ತುತ ಮಹದ್ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಇನ್ನು ಈ ದುರಂತ ಘಟನೆಗೆ ಸಂಬಂಧಿಸಿದಂತೆ ಕಂಪನಿಯು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಇನ್ನು ಈ ಘಟನೆಯ ಸುದ್ದಿ ತಿಳಿದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳವು ತುರ್ತು ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಿತು. ಬೆಂಕಿಯನ್ನು ನಂದಿಸಲು ಹತ್ತು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಯಿತು. ಸತತ ಪ್ರಯತ್ನಗಳ ಹೊರತಾಗಿಯೂ, ಸ್ಥಳದಲ್ಲಿ ಅಪಾಯಕಾರಿ ರಾಸಾಯನಿಕಗಳ ಉಪಸ್ಥಿತಿಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಜಟಿಲವಾಗಿದೆ. ಕಾಣೆಯಾದ ಕಾರ್ಮಿಕರನ್ನು ಪತ್ತೆಹಚ್ಚಲು ಮತ್ತು ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಪೊಲೀಸರು, ಅಗ್ನಿಶಾಮಕ ದಳದ ತಂಡಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ ಎಫ್) ಸಹಕರಿಸುತ್ತಿವೆ.