ರಾಪಿಡೋ ಬೈಕ್ ಟಾಕ್ಸಿ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ!

crime news
15/10/2023

ಬೆಂಗಳೂರು: ರಾಪಿಡೋ ಬೈಕ್ ಟಾಕ್ಸಿ ಚಾಲಕನೋರ್ವ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಖಾಸಗಿ ವಿಶ್ವವಿದ್ಯಾನಿಲಯದ 20 ವರ್ಷ ವಯಸ್ಸಿನ ಪದವಿ ವಿದ್ಯಾರ್ಥಿನಿಯೊಬ್ಬರು ಸೆ.30ರಂದು ಸಂಜೆ ಬ್ರಿಗೆಡ್ ರಸ್ತೆಯಲ್ಲಿರುವ ತನ್ನ ಸಹೋದರ ಸಂಬಂಧಿ ಇದ್ದ ಸ್ಥಳಕ್ಕೆ ತೆರಳಲು ರಾಪಿಡ್ ಬೈಕ್ ಬುಕ್ ಮಾಡಿದ್ದು, ಪ್ರಯಾಣದ ವೇಳೆ ಚಾಲಕ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಆಜಾಸ್ ಅಹ್ಮದ್ ಎಂಬ ಆರೋಪಿ ಈ ಕೃತ್ಯ ನಡೆಸಿರೋದಾಗಿ ವರದಿಯಾಗಿದೆ. ಸಿಗ್ನಲ್ ಒಂದರಲ್ಲಿ ಚಾಲಕ ಏಕಾಏಕಿ ಬೈಕ್ ನಿಲ್ಲಿಸಿದ್ದಾನೆ. ಕಾಲಿಗೆ ಏನೋ ಬಡಿದಂತಾಗಿ ಯುವತಿ ವೇಗ ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಆತ ಯುವತಿಯ ಪಾದವನ್ನು ಮುಟ್ಟಿದ್ದಾನೆ. ಕಾಳಜಿಯಿಂದ ಮುಟ್ಟಿರಬಹುದು ಎಂದು ಯುವತಿ ಅಂದುಕೊಂಡಿದ್ದಾಳೆ. ಆದ್ರೆ ಬಳಿಕ  ತೊಡೆ ಮುಟ್ಟಿದ ಆತ ಯುವತಿಯ ಹೆಸರು ಕೇಳಿದ್ದಾನೆ. ಬಳಿಕ ದೂರದ ಮಾರ್ಗದ ಮೂಲಕ ಕರೆದೊಯ್ದು, ಉದ್ದೇಶಿತ ಡ್ರಾಪ್ ಪ್ರದೇಶವಲ್ಲದ ಜಾಗದಲ್ಲಿ ಯುವತಿಯನ್ನು ಇಳಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಯುವತಿಯು ಆತನ ರಾಪಿಡೋ QR ಕೋಡ್ ಕೇಳಿದಾಗ, ಆತ ಮತ್ತೆ ಯುವತಿಯ ಹೆಸರು ತಿಳಿದುಕೊಳ್ಳಲು ಮುಂದಾಗಿದ್ದಾನೆ. ಯುವತಿಯ ಹೆಸರು ತಿಳಿದುಕೊಳ್ಳಲು ಬೇರೊಂದು ಆ್ಯಪ್ ಮೂಲಕ ಹಣ ಪಾವತಿ ಮಾಡುವಂತೆ ಒತ್ತಾಯಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಯುವತಿ ಹಾಗೂ ಆಕೆಯ ಸಹೋದರ ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಬೈಕ್ ಚಾಲಕನನ್ನು ಅಮಾನತು ಮಾಡಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಈ ಪ್ರಕರಣವನ್ನು ಅಶೋಕನಗರ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸಂತ್ರಸ್ತ ಯುವತಿ ಬಿಹಾರದ ಪಾಟ್ನಾ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version