ಜೈಲಿನಲ್ಲಿಟ್ಟಿರುವ ರಾಜ್ಯದ ರೈತರನ್ನು ಬಿಡುಗಡೆ ಮಾಡಿ: ಮಧ್ಯಪ್ರದೇಶ ಸಿಎಂಗೆ ಸಿದ್ದರಾಮಯ್ಯ ಒತ್ತಾಯ

15/02/2024
ಬೆಂಗಳೂರು: ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿದ್ದ ರಾಜ್ಯದ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿ ಜೈಲಿನಲ್ಲಿ ಇಟ್ಟಿರುವುದು ಸಂವಿಧಾನ ಬಾಹಿರ ಕ್ರಮ ಎಂದು ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.
ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ ರೈತರ ಗುಂಪನ್ನು ಬಂಧಿಸಿ 4 ದಿನಗಳೇ ಕಳೆದಿವೆ. ಅವರನ್ನು ಬಿಡುಗಡೆ ಮಾಡದೇ ವಾರಣಾಸಿಗೆ ವರ್ಗಾಯಿಸುತ್ತಿದ್ದಾರೆಂದು ತಿಳಿದು ಬಂದಿದ್ದು, ಶಾಂತಿಯುತ ಪ್ರತಿಭನೆಯಲ್ಲಿ ಭಾಗವಹಿಸುವುದು ನಾಗರಿಕರ ಸಂವಿಧಾನಿಕ ಹಕ್ಕಾಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆ ಕೇಳುವ ರೈತರನ್ನು ಬಂಧಿಸಿ ಅವರಿಗೆ ಕಿರುಕುಳ ನೀಡುವುದು ಸಂವಿಧಾನ ಪರ ಕ್ರಮವಲ್ಲ ಖಂಡನೀಯ ಎಂದಿರುವ ಸಿಎಂ, ಕೂಡಲೇ ರೈತರನ್ನು ಬಿಡುಗಡೆಗೊಳಿಸಬೇಕು ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರದ ಮೂಲಕ ಒತ್ತಾಯಿಸಿದ್ದಾರೆ.