ರಸ್ತೆ ಗುಂಡಿ ತೆಗೆಯಿತು ಜೀವ: ಲಾರಿಯಡಿಗೆ ಸಿಲುಕಿ ಮಹಿಳೆ ಸಾವು

ಮಂಗಳೂರು: ಮಂಗಳೂರಿನ ಹೆದ್ದಾರಿಗಳಲ್ಲಿ ಮರಣಗುಂಡಿಗಳು ಬಾಯ್ದೆರೆದು ನಿಂತಿದ್ದರೂ ಅವುಗಳನ್ನು ಮುಚ್ಚಲು ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ರಸ್ತೆ ಗುಂಡಿಗಳಿಂದ ನಿರಂತರವಾಗಿ ಮಂಗಳೂರಿನಲ್ಲಿ ಅಪಘಾತ ಸಂಭವಿಸುತ್ತಿದ್ದರೂ. ಸಂಬಂಧಪಟ್ಟವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಇದೀಗ ದ್ವಿಚಕ್ರ ವಾಹನ ಸವಾರೆ ಮಹಿಳೆಯೊಬ್ಬರು ರಸ್ತೆ ಗುಂಡಿಗೆ ಬಲಿಯಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನಗರದ ಹೊರವಲಯದ ಕೂಳೂರು ರಾಯಲ್ ಓಕ್ ಬಳಿ ನಡೆದಿದೆ.
ಮಂಗಳೂರಿನ ಎ.ಜೆ.ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಾಧವಿ ಎಂಬವರು ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದವರಾಗಿದ್ದಾರೆ.
ಕೂಳೂರು ಕಡೆಯಿಂದ ಎ.ಜೆ. ಆಸ್ಪತ್ರೆ ಕಡೆಗೆ ತೆರಳುತ್ತಿದ್ದ ವೇಳೆ ರಸ್ತೆಯ ಗುಂಡಿಗೆ ದ್ವಿಚಕ್ರ ವಾಹನ ಬಿದ್ದಿದೆ. ಈ ವೇಳೆ ದ್ವಿಚಕ್ರ ವಾಹನ ಸಹಿತವಾಗಿ ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮೀನು ಸಾಗಾಟದ ಲಾರಿ ಮಾಧವಿ ಅವರ ಮೇಲೆ ಹರಿಡಿದ್ದು, ಚಕ್ರದಡಿಗೆ ಸಿಲುಕಿ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಘಟನೆ ಬೆನ್ನಲ್ಲೇ ರಸ್ತೆ ಅವ್ಯವಸ್ಥೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ವ್ಯಾಪಕ ಒತ್ತಾಯ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD