ಸುಳ್ಳು ಹೇಳಿ ಆರೆಸ್ಸೆಸ್ ಭಾಗವತ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ: ಅಮೆರಿಕದ ಧರ್ಮಗುರುಗಳಿಂದ ಅಸಮಾಧಾನ

one world one humanity
04/09/2026

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖ ಅಮೆರಿಕನ್ ಧರ್ಮಗುರುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲಾಗಿದೆ ಮತ್ತು ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ.

ದಿ ವೈರ್ ವರದಿ ಪ್ರಕಾರ,  ಆಗಸ್ಟ್ 29 ರಂದು ನ್ಯೂಯಾರ್ಕ್‌ನ ‘ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ನಲ್ಲಿ “ಒನ್ ವರ್ಲ್ಡ್ ಒನ್ ಹ್ಯುಮಾನಿಟಿ” (ಒಂದು ಜಗತ್ತು, ಒಂದು ಮಾನವೀಯತೆ) ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಉಪನ್ಯಾಸ ನೀಡಿದ್ದರು. ಈ ಕಾರ್ಯಕ್ರಮದ ಬಳಿಕ ಅಮೆರಿಕದ ಧರ್ಮಗುರುಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನ್ಯೂಯಾರ್ಕ್‌ನ ರಿವರ್‌ ಸೈಡ್ ಚರ್ಚ್‌ನ ಮಂತ್ರಿ ಅಡ್ರಿಯನ್ ಥೋರ್ನ್  (Rev. Adriene Thorne) ಅವರು ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ತಮ್ಮನ್ನು ಈ ಕಾರ್ಯಕ್ರಮಕ್ಕೆ ಮೋಸದಿಂದ ಕರೆಸಿಕೊಳ್ಳಲಾಗಿದೆ ಎಂದಿದ್ದಾರೆ. “ವಿವಿಧ ಧರ್ಮಗಳ ಸಮ್ಮೇಳನ” (Interfaith gathering) ಎಂದು ಹೇಳಿ ಆಯೋಜಕರು ಹಲವಾರು ವಾರಗಳಿಂದ ತಮ್ಮನ್ನು ಸಂಪರ್ಕಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಆರ್‌ ಎಸ್‌ ಎಸ್ ಅಥವಾ ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳ ನಂಟು ಇರುವ ಕುರಿತು ಅಥವಾ ಮೋಹನ್ ಭಾಗವತ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕುರಿತು ತಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು “ದೊಡ್ಡ ತಪ್ಪು” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್‌ ನ ಪ್ರಮುಖ ಮುಸ್ಲಿಂ ಧರ್ಮಗುರು ಮತ್ತು ಅಂತರ್‌ ಧರ್ಮೀಯ ನಾಯಕರಾದ ಇಮಾಮ್ ಶಂಸಿ ಅಲಿ (Imam Shamsi Ali) ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮ್ಮ “ತೀರ್ಪಿನ ಗಂಭೀರ ಲೋಪ” ಎಂದು ಒಪ್ಪಿಕೊಂಡಿದ್ದಾರೆ. ಕಾರ್ಯಕ್ರಮದ ಆಯೋಜಕರು ತಮ್ಮ ಬಳಿ ಸತ್ಯವನ್ನು ಮುಚ್ಚಿಟ್ಟು, ಮೋಹನ್ ಭಾಗವತ್ ಅವರ ಕೇಂದ್ರ ಪಾತ್ರದ ಬಗ್ಗೆ ಯಾವುದೇ ಸುಳಿವು ನೀಡದೆ ತಮ್ಮನ್ನು ವಂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕಾರ್ಯಕ್ರಮದ ನೈಜ ಸ್ವರೂಪ ತಿಳಿದ ತಕ್ಷಣ ತಾವೇ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಮುಂದಿನ ಕಾರ್ಯಕ್ರಮದಿಂದ ದೂರ ಉಳಿದಿದ್ದಾಗಿ ತಿಳಿಸಿದ್ದಾರೆ.

ಆರ್‌ ಎಸ್‌ ಎಸ್ ಮುಖ್ಯಸ್ಥರ ನ್ಯೂಯಾರ್ಕ್ ಭೇಟಿ ಹಾಗೂ ಕಾರ್ಯಕ್ರಮದ ಮೊದಲು ಮತ್ತು ನಂತರದ ದಿನಗಳಲ್ಲಿ ಅಲ್ಲಿ ತೀವ್ರ ವಿವಾದಗಳು ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಈಗ ಅಂತರ್‌ಧರ್ಮೀಯ ನಾಯಕರಿಗೆ ಆಯೋಜಕರು ತಪ್ಪು ಮಾಹಿತಿ ನೀಡಿ ವೇದಿಕೆಗೆ ಕರೆಸಿರುವುದು ಈ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi
Exit mobile version