12:33 PM Wednesday 22 - October 2025

ಅಲ್ಲಾಹನನ್ನು ಮೆಚ್ಚಿಸಲು 6 ವರ್ಷದ ಮಗುವಿನ ಕತ್ತು ಸೀಳಿ ಕೊಂದ ಗರ್ಭಿಣಿ!

08/02/2021

ಪಾಲಕ್ಕಾಡ್: ನಂಬಿಕೆಗಳ ಹೆಸರಿನಲ್ಲಿ ಈ ಕಂಪ್ಯೂಟರ್ ಯುಗದಲ್ಲಿಯೂ ಮೂಢನಂಬಿಕೆ ಮುಂದುವರಿದಿದೆ. ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಪೋಷಕರು ತಮ್ಮ ಬೆಳೆದು ನಿಂತ ಇಬ್ಬರು ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಹತ್ಯೆ ಮಾಡಿದ ಪ್ರಕರಣ ನಡೆದಿತ್ತು. ಆ ಬಳಿಕ ಅದೇ ಪ್ರದೇಶದಲ್ಲಿ ಯುವಕನೋರ್ವ ನಾನು ದೇವರ ಬಳಿಗೆ ಹೋಗುತ್ತೇನೆ, ನನ್ನ ತಮ್ಮನಿಗೆ ಮಗನಾಗಿ ಹುಟ್ಟುತ್ತೇನೆ ಎಂದು ಲೆಟರ್ ಬರೆದಿಟ್ಟು ನಾಪತ್ತೆಯಾಗಿದ್ದ. ಇಂತಹದ್ದೇ ಘಟನೆಯೊಂದು ಇದೀಗ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

ಅಲ್ಲಾಹನನ್ನು ಮೆಚ್ಚಿಸಲು ಗರ್ಭಿಣಿ ಶಿಕ್ಷಕಿಯೊಬ್ಬಳು ತನ್ನ 6 ವರ್ಷದ ಮಗುವನ್ನು ಹತ್ಯೆ ಮಾಡಿದ್ದಾಳೆ. 30 ವರ್ಷದ ಶಿಕ್ಷಕಿ ಶಾಹಿದಾ ಈ ಕೃತ್ಯ ಎಸಗಿದವಳಾಗಿದ್ದು, ಕೃತ್ಯದ ಬಳಿಕ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಶಾಹಿದಾ ನಾನು ಅಲ್ಲಾಹನನ್ನು ಮೆಚ್ಚಿಸಲು ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾಳೆ.

ಶಾಹಿದಾ ಪತಿ ಗಲ್ಫ್ ನಿಂದ ಇತ್ತೀಚೆಗಷ್ಟೆ ಹಿಂದುರುಗಿದ್ದರು. ಘಟನೆ ನಡೆದ ದಿನ ಅವರು ಇನ್ನಿಬ್ಬರು ಮಕ್ಕಳೊಂದಿಗೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಮಹಿಳೆಯು ಬೆಳಗ್ಗೆ 4 ಗಂಟೆಗೆ ಎದ್ದು, ತನ್ನ ಕೊನೆ 6 ವರ್ಷದ ಮಗುವಿನ ಕೈ ಕಾಲು ಕಟ್ಟಿ ಹಾಕಿ ಬಾತ್ ರೂಮ್ ನಲ್ಲಿ ಮಗುವಿನ ಕತ್ತು ಸೀಳಿ ಕೊಂದು ಹಾಕಿದ್ದಾಳೆ.

ಕೊಲೆಯ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಈಕೆಯ ಕೃತ್ಯ ಪತಿ ಹಾಗೂ ಮಕ್ಕಳಿಗೆ ತಿಳಿದಿರಲಿಲ್ಲ. ಪೊಲೀಸರು ಬರುವ ವೇಳೆ ಮಗುವಿನ ಮೃತದೇಹ ಬಾತ್ ರೂಮ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿತ್ತು.

ಮಗುವನ್ನು ಯಾಕೆ ಕೊಂದು ಹಾಕಿದ್ದಿ ಎಂದು ಪೊಲೀಸರು ಪ್ರಶ್ನಿಸಿದಾಗ,ಅಲ್ಲಾಹನಿಗಾಗಿ ತಾನು ತ್ಯಾಗ ಮಾಡಿದ್ದೇನೆ ಎಂದು ಶಾಹಿದಾ ಹೇಳಿದ್ದಾಳೆ. ಆದರೆ, ಪೊಲೀಸರು ಹಲವು ಕೋನಗಳಲ್ಲಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬೇರೇನಾದರೂ ತಿರುವುಗಳಿರಬಹುದು ಎಂದು ಪೊಲೀಸರು ಕೂಡ ಶಂಕಿಸಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

ಇತ್ತೀಚಿನ ಸುದ್ದಿ

Exit mobile version