ಜಮ್ಮುಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆ ನಡೆಸಿ: 2019 ರ ಮೋದಿ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಅಸ್ತು

11/12/2023

ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019 ರ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಎತ್ತಿಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ತೀರ್ಪು ಪ್ರಕಟಿಸಿದೆ.

​ಸೆಪ್ಟೆಂಬರ್ 30, 2024 ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಸೆಂಬ್ಲಿ ಚುನಾವಣೆಗಳನ್ನು ನಡೆಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಜಮ್ಮು ಮತ್ತು ಕಾಶ್ಮೀರ ಶಾಸಕಾಂಗ ಸಭೆಯಲ್ಲಿ ಸೆಪ್ಟೆಂಬರ್ 2024 ರೊಳಗೆ ಚುನಾವಣೆಗಳು ನಡೆಯುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ರಾಜ್ಯತ್ವವನ್ನು ಮರುಸ್ಥಾಪಿಸಬೇಕು ಎಂದು ನಾವು ನಿರ್ದೇಶಿಸುತ್ತೇವೆ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ.
ಶೀಘ್ರದಲ್ಲೇ ಚುನಾವಣೆ ನಡೆಸಿ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಚುನಾವಣೆಯನ್ನು ಹೆಚ್ಚು ಕಾಲ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಇದರೊಂದಿಗೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ. ಇದಕ್ಕೆ ವಿಳಂಬ ಮಾಡಬೇಡಿ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

370ನೇ ವಿಧಿ ರದ್ದು ತಾತ್ಕಾಲಿಕ ನಿಬಂಧನೆ ಎಂದು ಸಿಜೆಐ ಹೇಳಿದ್ದಾರೆ. ಸಂವಿಧಾನ ರಚನಾ ಸಭೆಯ ವಿಸರ್ಜನೆಯ ನಂತರವೂ ರಾಷ್ಟ್ರಪತಿಗಳ ಅಧಿಕಾರ ಯಥಾಸ್ಥಿತಿಯಲ್ಲಿರಲಿದೆ. 370 ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಏಕೀಕರಣಕ್ಕಾಗಿ ಎಂದು ಸಿಜೆಐ ಹೇಳಿದರು.

370ನೇ ವಿಧಿ ರದ್ದಾದ ನಂತರ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂದು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ಐವರು ನ್ಯಾಯಮೂರ್ತಿಗಳಾದ ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರು 16 ದಿನಗಳ ಕಾಲ ಅರ್ಜಿದಾರರು ಮತ್ತು ಕೇಂದ್ರದ ವಾದವನ್ನು ಆಲಿಸಿದ್ದರು. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5 ರಂದು ಈ ಪ್ರಕರಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಆರೋಪಗಳನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನಿರಾಕರಿಸಿದ್ದು ಇದು “ಆಧಾರರಹಿತ” ಎಂದು ಹೇಳಿದರು.
370 ನೇ ವಿಧಿಯ ತೀರ್ಪು ಪ್ರಕಟವಾಗುವ ಮೊದಲು ಪೊಲೀಸರು ಮುಫ್ತಿ ಅವರ ನಿವಾಸದ ಬಾಗಿಲುಗಳನ್ನು ಮುಚ್ಚಿದ್ದರು ಎಂದು ಪಿಡಿಪಿ ಟ್ವೀಟ್ ನಲ್ಲಿ ತಿಳಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದವರಲ್ಲಿ ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣಿಯಂ, ರಾಜೀವ್ ಧವನ್, ದುಶ್ಯಂತ್ ದವೆ, ಗೋಪಾಲ್ ಶಂಕರನಾರಾಯಣನ್ ಮತ್ತು ಜಾಫರ್ ಶಾ ಸೇರಿದ್ದಾರೆ.

ಕೇಂದ್ರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹರೀಶ್ ಸಾಳ್ವೆ, ರಾಕೇಶ್ ದ್ವಿವೇದಿ ಮತ್ತು ವಿ.ಗಿರಿ ಇದ್ದರು.

ಇತ್ತೀಚಿನ ಸುದ್ದಿ

Exit mobile version