ಅಭಿವೃದ್ಧಿ ಕೆಲಸಗಳಿಗೆ  ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕೋ ಬೇಡವೋ?:  ಸಿಎಂ ಸಿದ್ದರಾಮಯ್ಯ ಪ್ರಶ್ನೆ

siddaramaiah
21/06/2024

ಬಳ್ಳಾರಿ, (ತೋರಣಗಲ್ಲು): ನಾವು ಗ್ಯಾರಂಟಿಗಳಿಗೆ 60,000 ಕೋಟಿ ಈ ವರ್ಷ ಒದಗಿಸಬೇಕು. ಅಭಿವೃದ್ಧಿ ಕೆಲಸಗಳಿಗೆ  ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕೋ ಬೇಡವೋ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಅವರು ಗುರುವಾರ ತೋರಣಗಲ್ಲಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯವರು ಗ್ಯಾರಂಟಿಗಳನ್ನು ರದ್ದು ಮಾಡಲು ಹೇಳಲಿ. ಹೇಳುತ್ತಾರೆಯೇ? ಎಂದು ಪ್ರಶ್ನಿಸಿದ ಅವರು ಡೀಸಲ್ ಪೆಟ್ರೋಲ್ ದರ ಹೆಚ್ಚಳವಾಗಿರುವುದರಿಂದ ವಿರೋಧ ಪಕ್ಷದವರು ಸಾರಿಗೆ ದರಗಳನ್ನು ಹೆಚ್ಚಿಸಲಾಗುತ್ತದೆ ಎಂದು  ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕೆ.ಎಸ್.ಆರ್.ಟಿ.ಸಿ. ಟಿಕೆಟ್ ದರಗಳನ್ನು ಹೆಚ್ಚಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ನರೇಂದ್ರ ಮೋದಿಯವರು ಕೇಂದ್ರ ಅಬಕಾರಿ ತೆರಿಗೆ 9.48 ರೂ. ಇದ್ದುದ್ದನ್ನು 32.98 ರೂ.ಗಳಿಗೆ ಏರಿಸಿದರು. ನಾವು ಮಾಡಿದೆವೋ ಅವರು ಹೆಚ್ಚು ಮಾಡಿದರು.

ಮನ್ ಮೋಹನ್ ಸಿಂಗ್  ಅವರು ಪ್ರಧಾನಿಗಳಾಗಿದ್ದಾಗ ಇದ್ದಾಗ ಒಂದು ಬ್ಯಾರೆಲ್‍ಗೆ ಕಚ್ಛಾತೈಲಕ್ಕೆ 113 ಡಾಲರ್ ಇತ್ತು, ಈಗ ಎಷ್ಟಾಗಿದೆ ಎಂದು ತಿಳಿದುಕೊಳ್ಳಿ. 2015 ರಲ್ಲಿ 50 ಡಾಲರ್‍ಗೆ ಇಳಿದಾಗ ಬೆಲೆಯನ್ನು ಕಡಿಮೆ ಮಾಡಿದರೆ. ಒಮ್ಮೆ 27 ಡಾಲರ್‍ಗೆ ಕಚ್ಛಾತೈದ ಬೆಲೆ ಇಳಿದಿತ್ತು. ಆಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿದರೆ? ಬಿಜೆಪಿ ಹೆಚ್ಚಿಸಿದರೆ ಮಾಧ್ಯಮದವರು ಸುಮ್ಮನಿರುತ್ತಾರೆ. ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದು ಹೇಳಿದರು.

ವಸ್ತುಸ್ಥಿತಿಯ ಮೇಲೆ ಆರೋಪ ಮಾಡಬೇಕು:

ಆರೋಪಗಳನ್ನು ವಸ್ತುಸ್ಥಿತಿಯ ಮೇಲೆ ಮಾಡಬೇಕು ಎಂದರು.  ನರೇಂದ್ರ ಮೋದಿಯವರು ಇದ್ದಾಗ ಒಂದು ಲೀಟರ್ ಪೆಟ್ರೋಲ್  ಬೆಲೆ 72 ರೂ.ಗಳಾಗಿತ್ತು. ಇಂದು 102 ರೂ.ಗಳಾಗಲು ಯಾರು ಕಾರಣ. ಒಂದು ಕಡೆ ಕಚ್ಛಾತೈಲದ ಬೆಲೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಪೆಟ್ರೋಲ್ ಬೆಲೆ ಹೆಚ್ಚು ಮಾಡಲಾಗಿದೆ. ಮನ್ಮೋಹನ್ ಸಿಂಗ್ ಅವರು ಇದ್ದಾಗ 103 ಕಚ್ಛಾತೈಲದ ಬೆಲೆ ಡಾಲರ್ ಬೆಲೆ ಇದ್ದಾಗ ಸಹಾಯಧನವನ್ನೂ ನೀಡಿ ಪೆಟ್ರೋಲ್ ಬೆಲೆಯನ್ನೂ ಇಳಿಸಿದ್ದರು. ನರೇಂದ್ರ ಮೋದಿಯವರ ಕಾಲದಲ್ಲಿ ಹೆಚ್ಚಾಗಿದೆ ಎಂದರು.

ರಾಜ್ಯದಲ್ಲಿ ಬೆಲೆಹೆಚ್ಚಾದರೂ ನೆರೆರಾಜ್ಯಗಳಿಗಿಂತ ಬೆಲೆ ಕಡಿಮೆ ಇದೆ:

ನಾವು ಬೆಲೆಏರಿಕೆ ಮಾಡಿರುವುದು ಅಭಿವೃದ್ಧಿಗಾಗಿ. ಡೀಸಲ್ ಪೆಟ್ರೋಲ್ ಮೇಲೆ  3. ರೂ ಹೆಚ್ಚು ಮಾಡಿದರೂ ನೆರೆಯ ರಾಜ್ಯಗಳಿಗಿಂತಲೂ ಕಡಿಮೆ ಬೆಲೆ ಇದೆ.   ವಾಹನ  ಸಂಚಾರ ಹಾಗೂ ಪೆಟ್ರೋಲ್ ಡೀಸಲ್  ಹಾಕಿಸಿಕೊಳ್ಳುವುದು  ಒಂದು ರಾಜ್ಯದಿಂದ  ಮತ್ತೊಂದು ರಾಜ್ಯಕ್ಕೆ ವಾಹನಗಳು ಹೋಗಬಾರದು ಎಂಬ ಕಾರಣಕ್ಕಾಗಿ ಎಂದರು.

ಗಣಿಗಾರಿಕೆಗೆ ಅನುಮತಿ ನೀಡಿರುವ ಬಗ್ಗೆ ಪರಿಶೀಲಿಸಲಾಗುವುದು:

ಸಂಡೂರಿನಲ್ಲಿ ಗಣಿಗಾರಿಕೆ ಮಾಡಲು ಪರಿಸರಪ್ರೇಮಿಗಳು ವಿರೋಧ ಮಾಡುತ್ತಿರುವ ಬಗ್ಗೆ ಮಾತನಾಡಿ,  ಕೇಂದ್ರ ಸಚಿವ ಹೆಚ್.ಡಿ .ಕುಮಾರಸ್ವಾಮಿಯವರನ್ನು ಕೇಳಿ. ಒಂದು ಕಾಲದಲ್ಲಿ ಅವರೇ ವಿರೋಧಿಸಿ ಈಗ ಅವರೇ ಗಣಿಗಾರಿಕೆ ಮಾಡಿ ಎನ್ನುತ್ತಿದ್ದಾರೆ.  ಈ ಬಗ್ಗೆ  ಪರಿಶೀಲಿಸಲಾಗುವುದು ಎಂದರು. ವಿಜಯನಗರ ಬಳ್ಲಾರಿ ಜಿಲ್ಲೆಯ ಕೆಲ ಶಾಸಕರು ಗಣಿಗಾರಿಕೆಯನ್ನು ಸ್ವಾಗತಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪರಿಶೀಲಿಸಲಾಗುವುದು ಎಂದರು.

ಕರ್ನಾಟಕ್ಕೆ  ಅನ್ಯಾಯವಾಗಿರುವ ಬಗ್ಗೆ ಸಂಸದರು ಮಾತನಾಡಿಲ್ಲ:

ಹಿಂದಿನ  ಬಿಜೆಪಿ ಸರ್ಕಾರ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲಿನ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.  ಸರ್ಕಾರ ಈ ಕುರಿತು ಪ್ರಯತ್ನ ಮಾಡಲಿದೆಯೇ ಎಂಬ ಬಗ್ಗೆ ಉತ್ತರಿಸಿ 16 ನೇ ಹಣಕಾಸು ಆಯೋಗ ಕೆಲಸ ಪ್ರಾರಂಭ ಮಾಡಿದೆ.  ಆಯೋಗವು ಕೇಂದ್ರ ಹಾಗೂ ನಮಗೆಷ್ಟು ಬರಬೇಕೆಂದು ಹಂಚಿಕೆ  ಮಾಡುತ್ತದೆ. 14 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15 ನೇ ಹಣಕಾಸು ಆಯೋಗದಿಂದ ನಮಗೆ ಅನ್ಯಾಯವಾಗಿದೆ. ನಮಗೆ 1 ಲಕ್ಷ 87 ಸಾವಿರ ಕೋಟಿ ನಷ್ಟವಾಗಿದೆ.  ತೆರಿಗೆ ಹಂಚಿಕೆ ಹಾಗೂ ತೆರಿಗೆ ಹಂಚಿಕೆಯಾಗುವ ವ್ಯಾಪ್ತಿ ಕೂಡ ಕಡಿಮೆಯಾಯಿತು. ಸೆಸ್ ಹಾಗೂ ಸರ್ಚಾಜ್ ಹೆಚ್ಚು ವಸೂಲು ಮಾಡಲು ಪ್ರಾರಂಭಿಸಿದರು. ಸೆಸ್ ಹಾಗೂ  ಸರ್ಚಾಜ್ ನಲ್ಲಿ ನಮಗೆ ಪಾಲು ಬರುವುದಿಲ್ಲ.  ಕೇಂದ್ರವೇ ಇಟ್ಟುಕೊಳ್ಳುತ್ತದೆ. ಕರ್ನಾಟಕ್ಕೆ  ಅನ್ಯಾಯವಾಗಿರುವ ಬಗ್ಗೆ ಬಳ್ಳಾರಿ ಸೇರಿದಂತೆ ಒಬ್ಬ ಸಂಸದರೂ ಬಾಯಿ ಬಿಟ್ಟಿಲ್ಲ.  ಆರು ತಿಂಗಳಾದರೂ ಕೂಡ ಬರ ಪರಿಹಾರ ಕೊಡದಿದ್ದಾಗಲೂ ಒಬ್ಬರೂ ಬಾಯಿ ಬಿಡಲಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಡೆಹಾಕಿದ್ದರಿಂದ  15 ನೇ ಹಣಕಾಸು ಆಯೋಗ 5495 ಕೋಟಿ  ರೂ.ಗಳನ್ನು ರಾಜ್ಯಕ್ಕೆ  ಕೊಡಲಿಲ್ಲ. ಆಗಲಾದರೂ ಸಂಸದರು ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.  ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಟ್ ಹಾಗೂ ಕೆರೆಗಳ ಅಭಿವೃದ್ಧಿಗೆ 6000 ಕೋಟಿ ರೂ.ಗಳನ್ನು  ಕೊಟ್ಟರೇ?   ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು  ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರು,  ಕೊಟ್ಟರೇ? ಇದನ್ನೆಲ್ಲ ಕೇಳುವವ್ಯಾರು? ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ನಮ್ಮ ಡಿ.ಕೆ.ಸುರೇಶ್ ಒಬ್ಬರೇ ಕೇಳಿದ್ದು. ಕೇಳಿದ್ದಕ್ಕೆ ದೇಶ ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.  ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಏನೇನು ಮಾತನಾಡಿದ್ದಾರೆ ಎಂದು ಹೇಳಲೇ? ತೆರಿಗೆ ಡೀಸಲ್ ಬಗ್ಗೆ  ಏನು ಹೇಳಿದ್ದಾರೆ ಎಂದು ಹೇಳಲೆ ಎಂದು ಸಿಎಂ ಮಾಧ್ಯಮದವರಿಗೆ  ಮರುಪ್ರಶ್ನಿಸಿದರು.

ಮೂರು ರಾಜ್ಯಗಳ ಮಧ್ಯೆ ಮಾತುಕತೆ:

ಕೊಪ್ಪಳ ತಾಲ್ಲೂಕಿನ ನವಲೆಯಲ್ಲಿ ತುಂಗಭದ್ರಾ ಬ್ಯಾಲೆನ್ಸಿಂಗ್ ರಿಸರ್ವಾಂiÀiರ್ ನಿರ್ಮಾಣದ ಬಗ್ಗೆ ಮಾತನಾಡಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಮಧ್ಯೆ ಮಾತುಕತೆ ಪ್ರಾರಂಭ ಮಾಡಿ ಡಿಪಿಆರ್ ಮಾಡಿಸಲಾಗುವುದು ಎಂದರು.

ಅಂಗನವಾಡಿ ನೌಕರರ ಮುಷ್ಕರ: ಸೋಮವಾರ ಸಭೆ:

ಅಂಗನವಾಡಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ಎರಡೂ ಇಲಾಖೆಗಳು ಸಭೆ ಸೇರಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸೂಚಿಸಿದ್ದು ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಾಗುವುದು ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version