ಅನರ್ಹಗೊಂಡ ಕಾಂಗ್ರೆಸ್‌ನ ಆರು ಮಂದಿ ಬಿಜೆಪಿ ತೆಕ್ಕೆಗೆ

23/03/2024

ಹಿಮಾಚಲ ಪ್ರದೇಶದ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ನ ಆರು ಮಂದಿ ಬಿಜೆಪಿಗೆ ಸೇರಿದ್ದಾರೆ. ಇಲ್ಲಿರುವ ಏಕೈಕ ರಾಜ್ಯಸಭೆ ಸ್ಥಾನಕ್ಕೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ, ಈ ಆರು ಮಂದಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು. ಆ ಬಳಿಕ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಪಕ್ಷದ ವಿಪ್ ಉಲ್ಲಂಘಿಸಿದ್ದ ಆರೋಪದಲ್ಲಿ ಸುಧೀರ್ ಶರ್ಮಾ, ರವಿ ಠಾಕೂರ್, ರಾಜೀಂದರ್ ರಾಣಾ, ಇಂದೇರ್ ದತ್ ಲಖನ್‌ಪಾಲ್, ಚೇತನ್ಯ ಶರ್ಮಾ ಮತ್ತು ದೇವಿಂದರ್ ಕುಮಾರ್ ಭುಟ್ಟೊ ಅವರನ್ನು ಫೆಬ್ರುವರಿ 29ರಂದು ಸಭಾಧ್ಯಕ್ಷ ಕುಲದೀಪ್ ಸಿಂಗ್ ಪಟಾನಿಯಾ ಅನರ್ಹಗೊಳಿಸಿದ್ದರು.

ಚುನಾವಣಾ ಆಯೋಗವು ಇವರ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಪಕ್ಷೇತರ ಶಾಸಕರಾದ ಆಶಿಷ್ ಶರ್ಮಾ, ಹೊಶಿಯಾರ್ ಸಿಂಗ್ ಮತ್ತು ಕೆ.ಎಲ್.ಠಾಕುರ್ ಅವರೂ ತಮ್ಮ ಶಾಸಕತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಇವರು ಪ್ರತಿನಿಧಿಸುವ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಶಾಸಕರ ಅನರ್ಹತೆ ಮತ್ತು ಪಕ್ಷೇತರ ಶಾಸಕರ ರಾಜೀನಾಮೆಯಿಂದಾಗಿ, ಸದ್ಯ ವಿಧಾನಸಭೆಯ ಬಲ 59ಕ್ಕೆ ಕುಸಿದಿದೆ. ಸದ್ಯ ಕಾಂಗ್ರೆಸ್ 34 ಮತ್ತು ಬಿಜೆಪಿ 25 ಸದಸ್ಯರ ಬಲ ಹೊಂದಿದ್ದು, ಜೂನ್ 1ರಂದು ನಡೆಯುವ ಉಪಚುನಾವಣೆ ಬಳಿಕ ಅಧಿಕಾರ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version