ಬೆಂಗಳೂರಿನಲ್ಲಿ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಐವತ್ತನೇ ವರ್ಷಾಚರಣೆಯ ಪ್ರಯುಕ್ತ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯು ನಡೆಸುತ್ತಿರುವ ಕಾಶ್ಮೀರದಿಂದ ಆರಂಭವಾಗಿರುವ ಸಂವಿಧಾನ ಯಾತ್ರೆಯ ಸಮಾರೋಪ ಸಮಾರಂಭ ಸೆಪ್ಟೆಂಬರ್ 10 ರವಿವಾರದಂದು ಬೆಂಗಳೂರು ಮಹಾನಗರದ ಶ್ರೀ ಕೃಷ್ಣ ವಿಹಾರ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಕೆ.ಎಂ.ಮುಸ್ತಫಾ ನಈಮಿ ಹಾವೇರಿ ತಿಳಿಸಿದ್ದಾರೆ.
ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಕಳೆದ ಮೂರೂವರೆ ದಶಕಗಳಿಂದ ಕಾರ್ಯಾಚರಿಸುತ್ತಿರುವ ಸಂಘಟನೆಯು ವರದಕ್ಷಿಣೆಯಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಅಂದರು.
ಬೆಂಗಳೂರಿನಲ್ಲಿ ನಡೆಯಲಿರುವ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಉಪಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಸಹಿತ ಅನೇಕ ಗಣ್ಯರು ಆಗಮಿಸುತ್ತಾರೆ ಎಂದು ಹೇಳಿದ್ರು. ಸುದ್ದಿಗೋಷ್ಟಿಯಲ್ಲಿ ಸದಸ್ಯರಾದ ಇರ್ಶಾದ್ ಹಾಜಿ ಗೂಡಿನಬಳಿ, ಅಬ್ದುರ್ರಶೀದ್ ಮಡಂತ್ಯಾರು ಉಪಸ್ಥಿತರಿದ್ದರು.