ಮೋದಿಯವರೇ, ಕತಾರ್ ಗೆ ಶಾರೂಖ್ ಖಾನ್ ರನ್ನು ಕರೆದುಕೊಂಡು ಹೋಗಬೇಕಿತ್ತು: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕಿಡಿ

13/02/2024

ಪ್ರಧಾನಮಂತ್ರಿ ನರೇಂದ್ರ ಮೋದಿಯ ಕತಾರ್ ಭೇಟಿ ಕುರಿತಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ. ಕತಾರ್ ಗೆ ಪ್ರಧಾನಿ ತಮ್ಮೊಂದಿಗೆ ಬಾಲಿವುಡ್ ನಟ ಶಾರುಖ್ ಖಾನ್‌ರನ್ನೂ ಕರೆದೊಯ್ಯಬೇಕಾಗಿತ್ತು ಎಂದಿದ್ದಾರೆ.

ಗೂಢಚರ್ಯೆ ಆರೋಪ ಹೊತ್ತು ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿದ್ದ ಭಾರತದ ಎಂಟು ಮಂದಿ ಮಾಜಿ ನೌಕಾಪಡೆಯ ಅಧಿಕಾರಿಗಳನ್ನು ಶಾರುಖ್ ರ ಹಸ್ತಕ್ಷೇಪದ ಅನಂತರ ಕತಾರ್ ಬಿಡುಗಡೆಗೊಳಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಸ್ವಾಮಿ, “ಮೋದಿ ತಮ್ಮೊಂದಿಗೆ ಚಲನಚಿತ್ರ ನಟ ಶಾರುಖ್ ಖಾನ್‌ರನ್ನು ಕರೆದೊಯ್ಯಬೇಕಿತ್ತು. ಕತಾರ್‌ನ ಶೇಖ್‌ಗಳ ಮನವೊಲಿಸಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಫಲವಾದ ನಂತರ ಮೋದಿ ಅವರು ಶಾರುಖ್ ರನ್ನು ಹಸ್ತಕ್ಷೇಪ ನಡೆಸುವಂತೆ ಕೋರಿದ್ದರು ಹಾಗೂ ಈ ಮೂಲಕ ನಮ್ಮ ಮಾಜಿ ನೌಕಾಪಡೆ ಅಧಿಕಾರಿಗಳನ್ನು ಕತಾರ್ ಶೇಖ್‌ಗಳು ದುಬಾರಿ ಸೆಟ್ಲ್ಮೆಂಟ್ ಮೂಲಕ ಬಿಡುಗಡೆಗೊಳಿಸಲು ಒಪ್ಪಿದ್ದರು” ಎಂದು ಸ್ವಾಮಿ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ದಿನಗಳ ಯುಎಇ ಮತ್ತು ಖತರ್ ಭೇಟಿಗೆ ಹೊರಡುವ ಮುನ್ನ ಇಂದು ಟ್ವೀಟ್ ಮಾಡಿ, ತನ್ನ “ಸಹೋದರ” ಯುಎಇ ಅಧ್ಯಕ್ಷರ ಭೇಟಿಗೆ ಎದುರು ನೋಡುತ್ತಿರುವುದಾಗಿ ಬರೆದಿದ್ದರು. ಇದರ ಬೆನ್ನಲ್ಲೇ ಸ್ವಾಮಿ ಅವರ ಟ್ವೀಟ್ ಬಂದಿದೆ.

ಇತ್ತೀಚಿನ ಸುದ್ದಿ

Exit mobile version