ಮಗನನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ರಾ ಸುಚನಾ?: ಬಾಲಕನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ತಂದೆ!

suchana seth
10/01/2024

ಬೆಂಗಳೂರು: ಕೌಟುಂಬಿಕ ಕಲಹ 4 ವರ್ಷದ ಬಾಲಕನ ಪ್ರಾಣವನ್ನೇ ಕಿತ್ತುಕೊಂಡಿತ್ತು. ತಾಯಿಯಿಂದಲೇ ಹತ್ಯೆಗೀಡಾದ ನಾಲ್ಕು ವರ್ಷದ ಬಾಲಕ ಚಿನ್ಮಯ್ ನ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್ ನಲ್ಲಿ ಇಂದು ನಡೆಯಿತು.

ಮಗುವಿನ ತಂದೆ ವೆಂಕಟರಮಣ್ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಅಂತ್ಯಕ್ರಿಯೆ ವೇಳೆ ಮಗುವಿನ ತಂದೆ ವೆಂಕಟರಮಣ್ ಭಾವುಕರಾದರು.

ಇನ್ನೊಂದೆಡೆ ತನ್ನ ಮಗನನ್ನೇ ಕೊಂದ ಆರೋಪಿ ಸುಚನಾ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು 6 ದಿನಗಳ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಮೈಂಡ್ ಫುಲ್ ಎಐ ಲ್ಯಾಬ್ ಕಂಪೆನಿಯ ಸಿಇಓ ಆಗಿದ್ದ ಸುಚನಾ ಸೇಠ್  2010ರಲ್ಲಿ ವೆಂಕಟರಮಣ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ 2019ರಲ್ಲಿ ಚಿನ್ಮಯ್ ಜನಿಸಿದ್ದ, ಈ ಸಂದರ್ಭದಲ್ಲೇ ಇವರಿಬ್ಬರ ನಡುವೆ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚ್ಛೇದನದ ನಂತರ ವಾರದಲ್ಲಿ ಒಂದು ಬಾರಿ ಮಗನನ್ನು ನೋಡಲು ವೆಂಕಟರಮಣ್ ಬರುತ್ತಿದ್ದರು.

ತಾನು ಮತ್ತು ತನ್ನ ಮಗನ ನಡುವೆ ವೆಂಕಟರಮಣ್ ಬರುವುದು ಸುಚನಾಗೆ ಇಷ್ಟವಿರಲಿಲ್ಲ, ಹೀಗಾಗಿ ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದೊಂದಿಗೆ ಬಂದಿದ್ದರು ಎಂದು ವರದಿಯಾಗಿದೆ.  ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಸುಚನಾ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ತನ್ನ ಕೈಯನ್ನು ಕೊಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರ ಕೈಯಿಂದ ರಕ್ತ ಕೊಠಡಿಯಲ್ಲಿ  ಬಿದ್ದಿದೆ. ಇದೇ ವೇಳೆ ಸಾಯಲು ಧೈರ್ಯ ಸಾಲಲಿಲ್ಲವೋ ಅಥವಾ ಬೇರೆ ಇನ್ನೇನಾದರು ಉದ್ದೇಶದಿಂದಲೋ ಸುಚನಾ ತನ್ನ ನಿರ್ಧಾರವನ್ನು ಬದಲಿಸಿ, ಮಗನ ಮೃತದೇಹವನ್ನು ಸೂಟ್ ಕೇಸ್ ಗೆ ತುಂಬಿಸಿ ಕಾರು ಹತ್ತಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪ್ರಕರಣ ಬೆಳಕಿಗೆ ಬಂದಿತ್ತು.

ಒಟ್ಟಿನಲ್ಲಿ ಕೌಟುಂಬಿಕ ಕಲಹದ ಕಾರಣ ಬಾಳಿ ಬದುಕಬೇಕಿದ್ದ ಪುಟ್ಟ ಮಗುವೊಂದು ಬಲಿಯಾಗಿದೆ. ಈ ಮಗುವಿನ ಸಾವಿನ ಬಗ್ಗೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೌಟುಂಬಿಕ ಸಮಸ್ಯೆಗಳೇನೇ ಇರಲಿ, ಅವುಗಳನ್ನು ಸೂಕ್ತ ಸಮಾಲೋಚನೆ ಮೂಲಕ ಪರಿಹರಿಸಬೇಕೇ  ಹೊರತು, ಕೋಪದಲ್ಲಿ, ಅಸಹಾಯಕತೆಯ ಸಂದರ್ಭದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳದೇ ಸಮಾಧಾನದಲ್ಲಿ ಯೋಚಿಸಿದರೆ, ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ.

ಇತ್ತೀಚಿನ ಸುದ್ದಿ

Exit mobile version