ಸುವರ್ಣ ವಿಧಾನಸೌಧ: ಅಧ್ಯಕ್ಷರ ಪೀಠ ಸಿದ್ಧಪಡಿಸಲು 42.93 ಲಕ್ಷ ರೂ. ಖರ್ಚು!
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆ ಸಭಾಂಗಣದಲ್ಲಿ ಸಭಾಧ್ಯಕ್ಷರ ಪೀಠ ಮತ್ತು ಅದರ ಮುಂದಿರುವ ಟೇಬಲ್ ಸಿದ್ಧಪಡಿಸಲು 42.93 ಲಕ್ಷ ಮತ್ತು ವಿಧಾನ ಪರಿಷತ್ ಸಭಾಪತಿ ಪೀಠದ ಹಳೇ ಪ್ರೈವುಡ್, ಪ್ರೇಮ್, ಕೂಷನ್ ಬದಲಾಯಿಸಲು 1.98 ಲಕ್ಷ ವ್ಯಯಿಸುವ ಮೂಲಕ ರಾಜ್ಯ ಸರ್ಕಾರ ಜನರ ತೆರಿಗೆ ಹಣ ಪೋಲು ಮಾಡಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ವಿಧಾನಸೌಧದ ವಿಧಾನಸಭೆ ಸಭಾಂಗಣದ ಸಭಾಧ್ಯಕ್ಷರ ಪೀಠದ ಮಾದರಿಯಲ್ಲೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೂ ಪೀಠ ಸಿದ್ಧಪಡಿಸುವಂತೆ ಸಭಾಧ್ಯಕ್ಷರು ಸೂಚಿಸಿದ್ದರು. ಹಾಗಾಗಿ ರಾಜ್ಯ ಅರಣ್ಯ ಕೈಗಾರಿಕಾ ನಿಗಮವು 42.93 ಲಕ್ಷ ವ್ಯಯಿಸಿ ಸಿದ್ಧಪಡಿಸಿದ ಪೀಠವು, 2012ರಲ್ಲಿ ಸುವರ್ಣ ವಿಧಾನಸೌಧ ಉದ್ಘಾಟನೆಗೆ ಆಗಮಿಸಿದ್ದ ರಾಷ್ಟ್ರಪತಿಗಳ ವಿಶ್ರಾಂತಿಗಾಗಿ 36.60 ಲಕ್ಷ ವೆಚ್ಚದಲ್ಲಿ ತಯಾರಿಸಿದ್ದ ಪೀಠೋಪಕರಣಗಳ ದಾಖಲೆ ಮುರಿದಿದೆ ಎಂದು ಆಪಾದಿಸಿದರು.
ಚಿತ್ರಗಳಿಗಾಗಿ 67.67 ಲಕ್ಷ: ಸುವರ್ಣ ವಿಧಾನಸೌಧದಲ್ಲಿ ಮಹಾನ್ ನಾಯಕರು, ಗಣ್ಯರ 11 ಚಿತ್ರಗಳನ್ನು ಅಳವಡಿಸಲು ಮತ್ತು ಅನುಭವ ಮಂಟಪದ ತೈಲವರ್ಣದ ಚಿತ್ರ ಸಿದ್ಧಪಡಿಸಲು 67.67 ಲಕ್ಷ ವ್ಯಯಿಸಿ, ತೆರಿಗೆ ಹಣ ವ್ಯರ್ಥ ಮಾಡಲಾಗಿದೆ ಎಂದೂ ಗಡಾದ ದೂರಿದ್ದಾರೆ.
ರಾಜ್ಯದ ಹೆಸರಾಂತ ಚಿತ್ರ ಕಲಾವಿದರಿಂದ 8×5 ಉದ್ದಗಲದ ಅಳತೆಯಲ್ಲಿ ಏಳು ಮಹಾನ್ ನಾಯಕರ ಭಾವಚಿತ್ರಗಳನ್ನು ಸಿದ್ಧಪಡಿಸಲು ಸರ್ಕಾರವು 2023ರ ಫೆ.22ರಂದು 13.34 ಲಕ್ಷ ನೀಡಿತ್ತು. ನಂತರ ಅವುಗಳ ಪರಿಶೀಲನೆಗೆ ಬಂದಿದ್ದ ಚಿತ್ರ ಕಲಾ ಪರಿಷತ್ತಿನ ನುರಿತ ತಜ್ಞರ ತಂಡ, ಇಲ್ಲಿ ಅಳವಡಿಸಿದ ಭಾವಚಿತ್ರಗಳ ಚಹರೆಗಳಲ್ಲಿ ಹೋಲಿಕೆ ಇಲ್ಲ ಎಂದಿತು. ಇವುಗಳ ಬದಲಿಗೆ ತೈಲವರ್ಣದ ಚಿತ್ರ ತಯಾರಿಸುವಂತೆ ವರದಿ ನೀಡಿದ ಹಿನ್ನೆಲೆಯಲ್ಲಿ 2024ರ ಅ.25ರಂದು ಸರ್ಕಾರ ಮತ್ತೆ 28.49 ಲಕ್ಷ ನೀಡಿದೆ. ಇಷ್ಟಕ್ಕೆ ಸುಮ್ಮನಾಗದೆ ಸೌಧದಲ್ಲಿ ಅನುಭವ ಮಂಟಪದ ಚಿತ್ರಪಟ ಅಳವಡಿಸಿ, ಗಾಂಧೀಜಿ ಕಲಾಕೃತಿ ಹಸ್ತಾಂತರಿಸಲು 2025ರ ಫೆ.4ರಂದು 25.84 ಲಕ್ಷ ಬಿಡುಗಡೆ ಮಾಡಿದೆ’ ಎಂದು ಆಪಾದಿಸಿದರು.
ಒಂದೆಡೆ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದೇವೆ ಎನ್ನುತ್ತಿರುವ ರಾಜ್ಯ ಸರ್ಕಾರ, ವಿವಿಧ ಕಾಮಗಾರಿಗೆ ಅನಗತ್ಯ ಹಣ ವ್ಯಯಿಸುತ್ತಿರುವುದು ಸರಿಯಲ್ಲ. ಇದಕ್ಕೆ ಕಡಿವಾಣ ಹಾಕದಿದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD






















