10:58 AM Thursday 20 - November 2025

ಹೊಸ ಪಕ್ಷ ಘೋಷಣೆ ಮಾಡಿದ ತಮಿಳು ಸೂಪರ್ ಸ್ಟಾರ್ ವಿಜಯ್

tamil superstar vijay
02/02/2024

ಚೆನ್ನೈ: ತಮಿಳು ಸೂಪರ್ ಸ್ಟಾರ್ ವಿಜಯ್ ಅವರು ತಮಿಳಗ ವಿಟ್ರಿ ಕಳಗಂ(Tamizha Vetri Kazhagam) ಎಂಬ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ.

ತಮಿಳ ವಿಟ್ರಿ ಕಳಗಂ ನಾಯಕರು ವಿಜಯ್ ಅವರನ್ನು ಪಕ್ಷದ ಮುಖ್ಯಸ್ಥರಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಅವರು  ತಮಿಳಗ ವಿಟ್ರಿ ಕಳಗಂ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ತಮಿಳಗ ವಿಟ್ರಿ ಕಳಗಂ ಎಂಬ ಪಕ್ಷದ ಹೆಸರು “ತಮಿಳುನಾಡು ವಿಜಯ ಪಕ್ಷ” ಎಂಬ ಅರ್ಥದಲ್ಲಿ ಪಕ್ಷಕ್ಕೆ ಇಡಲಾಗಿದೆ ಎನ್ನಲಾಗಿದೆ. 2026ರ ತಮಿಳುನಾಡು ವಿಧಾನ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಜಯ್ ಪಕ್ಷ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ವಿಜಯ್ ತಿಳಿಸಿದ್ದಾರೆ.

ಇನ್ನೂ ರಾಜಕೀಯ ಪಕ್ಷ ಸ್ಥಾಪನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ಮಾತನಾಡಿದ ವಿಜಯ್,  ನಾನು ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದೇನೆ. ಆ ಬಳಿಕ ಸಾರ್ವಜನಿಕ ಸೇವೆ, ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ. ತಮಿಳುನಾಡಿನ ಜನತೆಗೆ ನಾನು ನೀಡುತ್ತಿರುವ ಕೃತಜ್ಞತೆ ಇದು ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯ್ ಈಗಾಗಲೇ 68 ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ವಿಜಯ್, ಉಚಿತ ಆಹಾರ ವಿತರಣೆ, ಶೈಕ್ಷಣಿಕ ವಿದ್ಯಾರ್ಥಿ ವೇತನಗಳು, ಗ್ರಂಥಾಲಯಗಳು, ಸಂಜೆ ಶಾಲೆ ಮತ್ತು ಕಾನೂನು ಸೇರಿದಂತೆ ಹಲವು ಚಾರಿಟಿ ಮತ್ತು ಕಲ್ಯಾಣ  ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ  ಪೆರಿಯಾರ್ ಅವರ ಅನುಯಾಯಿ ಕೂಡ ಆಗಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅಂಬೇಡ್ಕರ್ ಹಾಗೂ ಪೆರಿಯಾರ್ ಬಗ್ಗೆ ವಿದ್ಯಾರ್ಥಿಗಳು ಓದಬೇಕು ಎಂದು ಕರೆ ನೀಡಿದ್ದರು. ಇದಾದ ಬಳಿಕ ಒಂದು ವರ್ಗದ ಮುಖ್ಯಸ್ಥರನ್ನೊಳಗೊಂಡ ಮಾಧ್ಯಮಗಳು ಅವರ ಲಿಯೋ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂವ್  ಬರೆದಿತ್ತು. ಆದರೂ ಲಿಯೋ ಸಿನಿಮಾ ಸೂಪರ್ ಹಿಟ್ ಆಗಿದೆ.

ಇತ್ತೀಚಿನ ಸುದ್ದಿ

Exit mobile version