ಭೂಗಳ್ಳರಿಗೆ ಶಾಕ್ ನೀಡಿದ ತಹಶೀಲ್ದಾರ್: ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಕೆರೆ ಸೀಝ್!

ಬೆಂಗಳೂರು: ಖಾಸಗಿ ಕಂಪೆನಿ ಹಾಗೂ ಬಿಲ್ಡರ್ ಗಳ ಕೆರೆ ಒತ್ತುವರಿ ಪ್ರಯತ್ನವನ್ನು ತಹಶೀಲ್ದಾರ್ ವೊಬ್ಬರು ಹಿಮ್ಮೆಟ್ಟಿಸಿದ ಘಟನೆ ಆನೇಕಲ್ ನಲ್ಲಿ ನಡೆದಿದ್ದು, ಕೆರೆ ಒತ್ತುವರಿ ವಿರುದ್ಧ ತಹಶೀಲ್ದಾರ್ ದಿಟ್ಟ ಕ್ರಮಕೈಗೊಂಡಿದ್ದಾರೆ.
ಆನೇಕಲ್ ನ ಜಿಗಣಿ ಠಾಣೆ ವ್ಯಾಪ್ತಿಯಲ್ಲಿ ಬರುವ ಹೆನ್ನಾಗರ ಕೆರೆಯನ್ನು ಒತ್ತುವರಿ ಮಾಡಲು ಖಾಸಗಿ ಕಂಪೆನಿ ಹಾಗೂ ಬಿಲ್ಡರ್ ಗಳು ಯತ್ನಿಸುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ತಹಶೀಲ್ದಾರ್ ಶಿವಪ್ಪ ಲಮಾಣಿ ಹೆನ್ನಾಗರ ಕೆರೆ ಪ್ರದೇಶ ಹಾಗೂ ಮಾಸ್ತೇನಹಳ್ಳಿ ಸರ್ಕಾರಿ ಜಾಗವನ್ನು ಸೀಝ್ ಮಾಡಿದ್ದಾರೆ.
ಕೆರೆಯನ್ನು ಸೀಝ್ ಮಾಡಿರುವ ತಹಶೀಲ್ದಾರ್ ಸರ್ವೇ ನಡೆಸಲು ಆದೇಶ ನೀಡಿದ್ದಾರೆ. ಕೆರೆ ಪ್ರದೇಶಕ್ಕೆ ಯಾರೂ ಪ್ರವೇಶಿಸದಂತೆ ಕಬ್ಬಿಣದ ಸರಳುಗಳನ್ನು ಅಳವಡಿಸಿದ್ದಾರಲ್ಲದೇ ಇಡೀ ಹೆನ್ನಾಗರ ಕೆರೆ ಪ್ರದೇಶವನ್ನು ಸೀಝ್ ಮಾಡಿದ್ದಾರೆ. ಜೊತೆಗೆ ಕೆರೆ ಒತ್ತವರಿಗೆ ಮುಂದಾಗಿದ್ದ ಖಾಸಗಿ ಕಂಪೆನಿ ಹಾಗೂ ಬಿಲ್ಡರ್ ಗಳ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಕಂಪೆನಿ ಹಾಗೂ ಬಿಲ್ಡರ್ ಗಳು ಕೆರೆ ಪ್ರದೇಶವನ್ನು ಲಾರಿಗಳ ಮೂಲಕ ಮಣ್ಣು ತೆಗೆದುಕೊಂಡು ಬಂದು ಸಮತಟ್ಟು ಮಾಡಿದ್ದಾರೆ ಎನ್ನಲಾಗ್ತಿದೆ. ಕೆರೆ ಜಾಗವನ್ನು ಅಮಾಯಕರಿಗೆ ಮಾರಾಟಮಾಡಲು ಯತ್ನಿಸಲಾಗಿತ್ತು ಎನ್ನಲಾಗಿದೆ. ಇದೀಗ ಈ ಬಗ್ಗೆ ತಹಶೀಲ್ದಾರ್ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೆರೆಯೊಂದನ್ನು ಅಧಿಕಾರಿಗಳು ಸೀಝ್ ಮಾಡಿದ್ದಾರೆ. ಈ ಮೂಲಕ ಭೂಗಳ್ಳರಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ.