ಹೃದಯ ವಿದ್ರಾವಕ ಘಟನೆ: ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್ | ತುಂಬು ಗರ್ಭಿಣಿ, ಗರ್ಭದಲ್ಲಿದ್ದ ಶಿಶು ಸಾವು

ವಿಜಯಪುರ: ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ವೊಂದು ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ತುಂಬು ಗರ್ಭಿಣಿ ಹಾಗೂ ತಾಯಿಯ ಗರ್ಭದಲ್ಲಿದ್ದ ಶಿಶು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಾಗ್ಯಶ್ರೀ ಪರಣ್ಣನವರ(20) ಹಾಗೂ ಅವರ ಗರ್ಭದಲ್ಲಿದ್ದ ಶಿಶು ಮೃತಪಟ್ಟವರಾಗಿದ್ದಾರೆ. ಮೊದಲ ಹೆರಿಗೆಗಾಗಿ ಭಾಗ್ಯಶ್ರೀ ತಮ್ಮ ತವರಿಗೆ ತೆರಳಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾಗ್ಯಶ್ರೀ ಅವರನ್ನು ತಾಳಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದಾಗಿ ಜಿಲ್ಲಾಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ರವಾನಿಸಲಾಗುತ್ತಿತ್ತು.
ಜಿಲ್ಲಾಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ನಿಂತಿದ್ದ ಕಬ್ಬುತುಂಬಿದ ಟ್ರ್ಯಾಕ್ಟರ್ ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆ್ಯಂಬುಲೆನ್ಸ್ ನಲ್ಲಿದ್ದ ತುಂಬು ಗರ್ಭಿಣಿ ಭಾಗ್ಯಶ್ರೀ ಅವರು ಮೃತಪಟ್ಟಿದ್ದು, ಆ್ಯಂಬುಲೆನ್ಸ್ ನಲ್ಲಿದ್ದ ಇಬ್ಬರು ಸ್ಟಾಫ್ ನರ್ಸ್ ಹಾಗೂ ಓರ್ವ ಸಹಾಯಕ ಗಾಯಗೊಂಡಿದ್ದಾರೆ.
ಆ್ಯಂಬುಲೆನ್ಸ್ ಚಾಲಕನ ಅಜಾಗರೋಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿತ್ತು. ಒಂದು ಹಂತದಲ್ಲಿ ವೈದ್ಯಾಧಿಕಾರಿಗಳ ಮೇಲೆ ಹಲ್ಲೆಗೂ ಯತ್ನಿಸಿದ ಘಟನೆ ನಡೆಯಿತು.