ಶಿಕ್ಷಕರ ವೃತ್ತಿ ಪವಿತ್ರವಾದುದು; ಪ್ರಬುದ್ಧ ಸಮಾಜ ನಿರ್ಮಾಣ ಮಾಡುವ ರೂವಾರಿಗಳು ಶಿಕ್ಷಕರು: ಗುರುದಾಸ ಶೆಣೈ
ಹೆಬ್ರಿ: “ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದುದು. ಒಂದು ಪ್ರಬುದ್ಧ ಸಮಾಜವನ್ನು ನಿರ್ಮಾಣ ಮಾಡುವ ನಿಜವಾದ ರೂವಾರಿಗಳು ಶಿಕ್ಷಕರು. ಶಿಕ್ಷಕರು ತಮ್ಮನ್ನು ಕೇವಲ ವೃತ್ತಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ, ವಿದ್ಯಾಭಾರತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರು ಸಮಾಜದ ಆಸ್ತಿಯಾಗಬೇಕು ಎನ್ನುವುದೇ ವಿದ್ಯಾಭಾರತಿ ಕರ್ನಾಟಕದ ಮುಖ್ಯ ಆಶಯವಾಗಿದೆ” ಎಂದು ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷರಾದ ಗುರುದಾಸ ಶೆಣೈ ಹೆಬ್ರಿ ನುಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಹಾಗೂ ಪಿ.ಆರ್.ಎನ್. ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹೆಬ್ರಿಯ ಪಿ.ಆರ್.ಎನ್ ಅಮೃತ ಭಾರತಿ ಅನ್ನಪೂರ್ಣ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಮೇಳ, ಗಣಿತ, ವೇದಗಣಿತ, ಯೋಗ ಹಾಗೂ ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆಗಳ ಪೂರ್ವ ಸಿದ್ಧತಾ ಬೈಠಕ್‌ನ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಆಗಸ್ಟ್ ನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳು:
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ದಿನಾಂಕಗಳನ್ನು ಬೈಠಕ್ ನಲ್ಲಿ ಪ್ರಕಟಿಸಲಾಯಿತು:
- ಆಗಸ್ಟ್ 10: ಶಿಶುವರ್ಗ ಮತ್ತು ಬಾಲವರ್ಗ ವಿಭಾಗದ ಜಿಲ್ಲಾ ಮಟ್ಟದ ವಿಜ್ಞಾನ, ಗಣಿತ, ವೇದಗಣಿತ ಹಾಗೂ ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆಗಳು ಹೆಬ್ರಿಯ ಪಿ.ಆರ್.ಎನ್. ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಲಿವೆ.
- ಆಗಸ್ಟ್ 19: ಜಿಲ್ಲಾ ಮಟ್ಟದ ಕಿಶೋರ್ ವರ್ಗದ ಸ್ಪರ್ಧೆಗಳು ಕುತ್ಯಾರಿನ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಾಲೆಯಲ್ಲಿ ಜರುಗಲಿವೆ.
ಜಿಲ್ಲಾ ವಿಜ್ಞಾನ ಪ್ರಮುಖ್ ಆಗಿ ಪ್ರಶ್ಮಿತಾ ಆಯ್ಕೆ:
ಇದೇ ಸಂದರ್ಭದಲ್ಲಿ ಬ್ರಹ್ಮಾವರದ ಚೇರ್ಕಾಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಜ್ಞಾನ ಮಾತಾಜಿಯಾದ ಪ್ರಶ್ಮಿತಾ ಅವರನ್ನು ವಿದ್ಯಾಭಾರತಿ ಉಡುಪಿ ಜಿಲ್ಲಾ ವಿಜ್ಞಾನ ಪ್ರಮುಖ್ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶಕುಂತಲಾ ಅವರು ವಿಜ್ಞಾನ, ಗಣಿತ ಹಾಗೂ ವೇದಗಣಿತ ಮೇಳದ ನಿಯಮಾವಳಿಗಳ ಮಾಹಿತಿಯನ್ನು ನೀಡಿದರು. ಜಿಲ್ಲಾ ಸಂಸ್ಕೃತಿ ಜ್ಞಾನ ಪ್ರಮುಖ್ ಜ್ಯೋತಿ ಎಳ್ಳಾರೆ ಅವರು ಸಂಸ್ಕೃತಿ ಜ್ಞಾನ ಮಹೋತ್ಸವಕ್ಕೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಪಾಂಡುರಂಗ ಪೈ ಸಿದ್ಧಾಪುರ, ಅಮೃತ ಭಾರತಿ ಟ್ರಸ್ಟ್ ಸದಸ್ಯರಾದ ಶೈಲೇಶ್ ಕಿಣಿ ಹೆಬ್ರಿ, ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯ ಕುಮಾರ ಶೆಟ್ಟಿ, ಜಿಲ್ಲಾ ಗಣಿತ ಪ್ರಮುಖ್ ಜ್ಯೋತಿ ಸಿದ್ಧಾಪುರ, ಅಮೃತ ಭಾರತಿ ವಿದ್ಯಾಲಯ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಅಪರ್ಣಾ ಆಚಾರ್ ಹಾಗೂ ಅಮೃತ ಭಾರತಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಅರುಣ್ ಕುಮಾರ್ ಎಚ್. ವೈ. ಉಪಸ್ಥಿತರಿದ್ದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬೈಠಕ್ ನಿರ್ವಹಿಸಿದರು. ಈ ಮಹತ್ವದ ಪೂರ್ವ ಸಿದ್ಧತಾ ಸಭೆಯಲ್ಲಿ ವಿವಿಧ ಸಂಸ್ಥೆಗಳ 32 ಗಣಿತ ಮತ್ತು ವಿಜ್ಞಾನ ಮಾತಾಜಿಯರು ಹಾಗೂ ಗುರೂಜಿಗಳು ಭಾಗವಹಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























