11:37 PM Thursday 21 - August 2025

ಕಾಲಿಂಗ್‌ ಬೆಲ್ ಬಾರಿಸಿ ಮನೆಗೆ ನುಗ್ಗಿದ ದರೋಡೆಕೋರರು: 3 ಲಕ್ಷಕ್ಕೂ ಅಧಿಕ ನಗ ನಗದು ದೋಚಿ ಪರಾರಿ

robbery
11/01/2024

ಬಂಟ್ವಾಳ: ಮನೆಯ ಕಾಲಿಂಗ್‌ ಬೆಲ್‌ ಬಾರಿಸಿದ ದರೋಡೆಕೋರರು, ಮನೆಯವರು ಬಾಗಿಲು ತೆರೆಯುತ್ತಿದ್ದಂತೆಯೇ ಒಳಗೆ ನುಗ್ಗಿ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ಮೌಲ್ಯದ ನಗದು ದೋಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಬಳಿಯಲ್ಲಿ ನಡೆದಿದೆ.

ತಿಮ್ಮಕ್ಕ ಉದ್ಯಾನವನದ ಮುಂಭಾಗದಲಿರುವ ಮನೆಯಲ್ಲಿ ಗುರುವಾರ ಬೆಳಿಗ್ಗೆ ಪ್ಲೋರಿನ್‌ ಪಿಂಟೋ ಹಾಗೂ ಮಗಳು ಮರೀನಾ ಪಿಂಟೋ ಇದ್ದ ವೇಳೆ ಕಾಲಿಂಗ್‌ ಬೆಲ್‌ ಭಾರಿಸಿದ ದರೋಡೆಕೋರರು ಮುಸುಕು ಹಾಕಿಕೊಂಡು ಏಕಾಏಕಿ ಮನೆಗೆ ಪ್ರವೇಶಿಸಿದ್ದಾರೆ. ಬಳಿಕ ಮನೆಯವರಿಗೆ ಚಾಕು ತೋರಿಸಿ ಬೆದರಿಸಿದ್ದು, ಸುಮಾರು 2.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 30 ಸಾವಿರ ಹಣ ಹಾಗೂ ಒಂದು ಮೊಬೈಲ್‌ ಫೋನ್‌ ಸೇರಿದಂತೆ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ ನಗದು ದೋಚಿದ್ದಾರೆ.

ತಂಡದಲ್ಲಿ ನಾಲ್ವರು ದುಷ್ಕರ್ಮಿಗಳಿದ್ದರು. ದರೋಡೆಕೋರರ ಚಿನ್ನಾಭರಣ ದೋಚಲು ಯತ್ನಿಸಿದಾಗ ಅಡ್ಡ ಬಂದ ಮರೀನಾ ಅವರ ಕೈಗೆ ದರೋಡೆಕೋರರು ಗಾಯ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ದಕ್ಷಿಣ ಕನ್ನ‌ಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ನಿರೀಕ್ಷಕ ಶಿವಕುಮಾರ್‌, ಠಾಣಾ ಉಪ ನಿರೀಕ್ಷಕ ಹರೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.

ಇತ್ತೀಚಿನ ಸುದ್ದಿ

Exit mobile version