ಸಿಕ್ಕಿಂ ಪ್ರವಾಹ: ಪ್ರವಾಸಕ್ಕೆ ತೆರಳಿದ್ದ ನಟಿ ಸರಳಾ ಕುಮಾರಿ ನಾಪತ್ತೆ; ಪತ್ತೆಹಚ್ಚಿ ಕೊಡುವಂತೆ ಪುತ್ರಿಯ ಮನವಿ

ಸಿಕ್ಕಿಂನಲ್ಲಿ ಉಂಟಾದ ಹಠಾತ್ ಪ್ರವಾಹದ ವೇಳೆ ಪ್ರವಾಸಕ್ಕೆ ತೆರಳಿದ್ದ ಟಾಲಿವುಡ್‌ನ ಹಿರಿಯ ನಟಿ ಸರಳಾ ಕುಮಾರಿ ನಾಪತ್ತೆಯಾಗಿದ್ದಾರೆ. ಪ್ರವಾಹದಲ್ಲಿ ಸೇನಾ ಸಿಬ್ಬಂದಿ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿರುವ ಅವರ ಮಗಳು ನಬಿತಾ ಅವರು ಈಶಾನ್ಯ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ನಾಪತ್ತೆಯಾಗಿರುವ ತನ್ನ ತಾಯಿಯನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೈದರಾಬಾದ್‌ನಲ್ಲಿ ನೆಲೆಸಿದ್ದ ನಟಿ ಇತ್ತೀಚೆಗೆ ಸಿಕ್ಕಿಂಗೆ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ಬಗ್ಗೆ ಮಗಳಿಗೆ ಮೊದಲೇ ತಿಳಿಸಿದ್ದರು.
ಅಕ್ಟೋಬರ್ 3ರಂದು ಅವರೊಂದಿಗೆ ಕೊನೆಯ ಸಂಭಾಷಣೆಯ ನಂತರ ಸರಳಾ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ತನ್ನ ತಾಯಿ ಪತ್ತೆಯಾಗದ ಕಾರಣ ನಬಿತಾ ಆತಂಕ ವ್ಯಕ್ತಪಡಿಸಿದ್ದಾರೆ.
ಸಿಕ್ಕಿಂನಲ್ಲಿ ಉಂಟಾದ ಹಠಾತ್ ಪ್ರವಾಹದ ನಂತರ ಅವರು ಸರಳಾ ಅವರು ತಂಗಿದ್ದ ಹೋಟೆಲ್‌ಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. 1983ರಲ್ಲಿ ಮಿಸ್ ಆಂಧ್ರಪ್ರದೇಶ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಚಿತ್ರರಂಗ ಪ್ರವೇಶಿಸಿದ ಸರಳಾ ಕುಮಾರಿ ಹಲವು ತೆಲುಗು ಚಿತ್ರಗಳಲ್ಲಿ ನಟನೆ ಮಾಡಿದ್ದರು.