ಪರಿಶಿಷ್ಟ ಜಾತಿಯಲ್ಲಿ ‘ಮನ್ಸ’ ಜಾತಿ ಸೇರ್ಪಡೆಗೆ ತುಳುನಾಡ್ ಮನ್ಸ ಸಮಾಜ ಸೇವಾ ಸಂಘ ಒತ್ತಾಯ

ಪರಿಶಿಷ್ಟ ಜಾತಿಯಲ್ಲಿ ಮನ್ಸ ಜಾತಿಯನ್ನ ಸೇರ್ಪಡೆ ಮಾಡಬೇಕು ಎಂದು ತುಳುನಾಡ್ ಮನ್ಸ ಸಮಾಜ ಸೇವಾ ಸಂಘ ಒತ್ತಾಯಿಸುತ್ತಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದಿಂದ ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ಸದ್ಯಕೆ ಸ್ಥಗಿತಗೊಳಿಸಿ, ಸಮೀಕ್ಷೆ ನಮೂನೆಯಲ್ಲಿ ಸರ್ಕಾರದ ಪಟ್ಟಿಯಲ್ಲಿ ಸೇರ್ಪಡೆಗೊಂಡಿರದ ಮನ್ಸ ಜಾತಿಯ ಹೆಸರನ್ನು ನಮೂದಿಸಲು ಅವಕಾಶವನ್ನು ಕಲ್ಪಿಸಿ ಸಮೀಕ್ಷೆಯನ್ನು ಮುಂದುವರೆಸಬೇಕು ಎಂದು ತುಳುನಾಡ್ ಮನ್ಸ ಸಮಾಜ ಸೇವಾ ಸಂಘ ಆಗ್ರಹಿಸಿದೆ.
ಈ ಬಗ್ಗೆ ತುಳುನಾಡ್ ಮನ್ಸ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಣ್ಣಕೊಯುರ್ ಮಾತನಾಡಿ, ಜಾತಿ ಕಾಲಂ ನಲ್ಲಿ ತನ್ನ ಜಾತಿ ಹೆಸರು ಆದಿದ್ರಾವಿಡ, ಆದಿ ಕರ್ನಾಟಕ ಹಾಗೂ ಆದಿ ಆಂಧ್ರ ಎಂಬುದಾಗಿ ಬರೆಸಿದರೆ, ಸರ್ಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ 98 ಜಾತಿಗಳ ಹೆಸರನ್ನು ಮಾತ್ರ ಉಪಜಾತಿ ಕಾಲಂನಲ್ಲಿ ನಮೂದಿಸತಕ್ಕದ್ದು ಎಂಬುದಾಗಿ ಆದೇಶ ನೀಡಿದೆ. ಸರ್ಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿರದ ನಮ್ಮ ‘ಮನ್ಸ’ ಜಾತಿ ಹಾಗೂ ಇನ್ನಿತರ ಬಿಟ್ಟು ಹೋಗಿರುವ ಜಾತಿಗಳ ಹೆಸರನ್ನು ನಮೂದಿಸಲು ಅವಕಾಶ ಕಲ್ಪಿಸಿಲ್ಲ. ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ಕೊಟ್ಟರೂ ನಮ್ಮ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಮನ್ಸ ಜಾತಿಯ ಅಸ್ಮಿತೆಯನ್ನೇ ಮರೆಮಾಚುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಮನ್ಸ ದಕ್ಷಿಣ ಕನ್ನಡ ಮೂಲದ ಅಸ್ಪೃಶ್ಯ ಜಾತಿಗಳಲ್ಲಿ ಅತ್ಯಧಿಕ ಜನಸಂಖ್ಯೆಯಿರುವ ಸಮುದಾಯವಾಗಿರುತ್ತದೆ. ಈ ನಮ್ಮ ಮನ್ಸ ಸಮುದಾಯದ ಜನಸಂಖ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ ಉಡುಪಿ, ಚಿಕ್ಕಮಗಳೂರು, ಹಾಸನ ಕೊಡಗು, ಶಿವಮೊಗ್ಗ, ಹಾಗೂ ಕೇರಳ ರಾಜ್ಯದ ಕಾಸರಗೋಡುಗಳಲ್ಲಿ ಉದ್ಯೋಗ ನಿಮ್ಮಿತ್ತ ವಲಸೆ ಹೋಗಿ ಅಲ್ಲಿಯ ನೆಲೆಗೊಂಡಿದ್ದಾರೆ. ಈ ಸಮುದಾಯದ ಜನಸಂಖ್ಯೆ ಸುಮಾರು 5 ಲಕ್ಷಕ್ಕೂ ಮೇಲ್ಪಟ್ಟಿದೆ ಎಂಬುದನ್ನು ನಾವು ಅಧ್ಯಯನದಿಂದ ಕಂಡುಕೊಂಡಿದ್ದೇವೆ. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಒಂದು ಅಸ್ಪೃಶ್ಯ ಸಮುದಾಯವನ್ನು ಸರ್ಕಾರದ ಪರಿಶಿಷ್ಟ ಜಾತಿಯಲ್ಲಿ ಸೇರಿಸದೆ ಇರುವುದು ಬಹಳ ಖೇದಕರ ವಿಷಯವಾಗಿದೆ ಎಂದು ವೆಂಕಣ್ಣಕೊಯುರ್ ಹೇಳಿದರು.
ನಮ್ಮ ಈ ‘ಮನ್ಸ’ ಜಾತಿಯು ಸ್ವತಂತ್ರ ಅಸ್ಮಿತೆ ಇರುವ ಸಮುದಾಯವಾಗಿದ್ದು, ತಮ್ಮದೇ ಆಚಾರ, ವಿಚಾರ, ಸಾಂಸ್ಕೃತಿಕ ಹಿನ್ನಲೆಯುಳ್ಳದ್ದಾಗಿದೆ. “ಕಾನದ-ಕಟದ” ಎಂಬ ಸಾಂಸ್ಕೃತಿಕ ಅವಳಿ ವೀರರನ್ನು ತಮ್ಮ ಕುಲ ದೈವಗಳು ಎಂದು ಆರಾಧಿಸಿಕೊಂಡು ಬರುತ್ತಿರುವುದೆ ಈ ಸಮುದಾಯದ ಮೂಲ ‘ಅಸ್ಮಿತೆ”. ಈ ಮನ್ಸ ಸಮುದಾಯದ ಜಾತಿ ಹೆಸರನ್ನು ಸರ್ಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ನಮ್ಮ ಸಮುದಾಯದ ನಾಯಕರು ಕಳೆದ ಸುಮಾರು 30 ವರ್ಷಗಳಿಂದಲೂ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳಿಗೂ ಮನವಿಗಳನ್ನು ನೀಡುತ್ತಾ ಹೋರಾಟ ನಡೆಸುತ್ತಲೆ ಬಂದಿದ್ದೇವೆ. ‘ಮನ್ಸ’ ಜಾತಿಯ ಹೆಸರು ಸರ್ಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿರದ ಕಾರಣ ನಮ್ಮ ಸಮುದಾಯದ ಜನರು ಅನಿವಾರ್ಯವಾಗಿ ಸರ್ಕಾರದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ‘ಆದಿ’ ದ್ರಾವಿಡ’ ಎಂಬ ಹೆಸರಲ್ಲಿ ಇನ್ನಿತರ ಕೆಲವು ಮಲೆನಾಡು ಜಿಲ್ಲೆಗಳಲ್ಲಿ ‘ಆದಿ ಕರ್ನಾಟಕ’ ಎಂಬ ಹೆಸರಲ್ಲಿ ಜಾತಿ ದೃಢೀಕರಣ ಪತ್ರ ಪಡೆದುಕೊಂಡು, ಬರೀ ಮೂರು ನಾಲ್ಕನೆ ದರ್ಜೆಯ ಸರ್ಕಾರಿ ಹುದ್ದೆಗಳನ್ನು ಪಡೆಯಲು ಶಕ್ತರಾಗಿದ್ದೇವೆಯೇ ಹೊರತು ಒಂದನೇ ದರ್ಜೆಯ ಹುದ್ದೆಯನ್ನು ಪಡೆಯಲು ಸಾಧ್ಯವಾಗಲೇ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಅಚ್ಯುತ ಎಸ್., ಗೌರವ ಅಧ್ಯಕ್ಷ ಎಂ.ಶಾಂತರಾಂ, ಎಂ.ರಮೇಶ್ ಬೋಧಿ, ಬಿ.ಕೆ.ವಸಂತ, ಸಂಜೀವ ಉದಯ ಮತ್ತಿತರರು ಹಾಜರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: