ಚಿನ್ನಾಭರಣ ವಂಚನೆಗೆ ಬೇಸತ್ತು ತಿರುವನಂತಪುರಂನಲ್ಲಿ ಇಬ್ಬರು ಮಹಿಳಾ ಉದ್ಯೋಗಿಗಳು ಆತ್ಮಹತ್ಯೆ; ಆರೋಪಿ ಮಹಿಳೆ ಬಂಧನ
ತಿರುವನಂತಪುರಂ: ಸುಮಾರು 70 ಪವನ್ ಚಿನ್ನಾಭರಣಗಳನ್ನು ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ತಿರುವನಂತಪುರಂನಲ್ಲಿ ಇಬ್ಬರು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ವೆಂಗನೂರು ಚಾವಡಿನಾಡ ನಿವಾಸಿ ಐಶ್ವರ್ಯ ಮತ್ತು ವೆಣ್ಣಿಯೂರು ನೆಲ್ಲಿವಿಲ ನಿವಾಸಿ ಅಂಜು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇಬ್ಬರೂ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಅಂಜು ಶನಿವಾರ ಸಾವನ್ನಪ್ಪಿದ್ದರೆ, ಆತ್ಮಹತ್ಯೆಗೆ ಯತ್ನಿಸಿ ತೀವ್ರ ನಿಗಾ ಘಟಕದಲ್ಲಿದ್ದ ಐಶ್ವರ್ಯ ಸೋಮವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಬಂಧಿತ ಆರೋಪಿ ಸಿಂಧು ಕುಮಾರಿ (53) ಎಂಬಾಕೆ ಈ ಹಿಂದೆ ಚಿನ್ನದ ವ್ಯಾಪಾರ ನಡೆಸುತ್ತಿದ್ದವಳಾಗಿದ್ದು, ಈ ಯುವತಿಯರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಳು. “ನಿಮ್ಮ ಹಣಕಾಸು ಸಂಸ್ಥೆಯಲ್ಲಿ ಗ್ರಾಹಕರು ಅಡವಿಟ್ಟಿರುವ ಚಿನ್ನಾಭರಣಗಳನ್ನು ನನಗೆ ನೀಡಿ, ನಾನು ಅದನ್ನು ಕಡಿಮೆ ಬಡ್ಡಿದರದಲ್ಲಿ KSFE (ಕೇರಳ ರಾಜ್ಯ ಹಣಕಾಸು ಉದ್ಯಮ) ದಲ್ಲಿ ಮರು–ಅಡಮಾನ ಇಟ್ಟು ನಿಮಗೆ ಕಮಿಷನ್ ನೀಡುತ್ತೇನೆ” ಎಂದು ನಂಬಿಸಿದ್ದಳು.
ಮೊದಲ ಬಾರಿ ಪಡೆದ ಚಿನ್ನವನ್ನು ಸರಿಯಾಗಿ ಹಿಂತಿರುಗಿಸಿ ಇಬ್ಬರ ವಿಶ್ವಾಸ ಗಳಿಸಿದ್ದಳು. ಇದನ್ನೇ ನಂಬಿದ ಐಶ್ವರ್ಯ 50 ಪವನ್ ಹಾಗೂ ಅಂಜು 20 ಪವನ್ ಚಿನ್ನಾಭರಣಗಳನ್ನು ಆಕೆಗೆ ನೀಡಿದ್ದರು. ಆದರೆ ನಂತರ ಸಿಂಧು ಆ ಚಿನ್ನವನ್ನು ಬೇರೆಡೆ ಮಾರಿ ವಂಚಿಸಿದ್ದಾಳೆ.
ಸಾಲದ ಸುಳಿಗೆ ಸಿಲುಕಿದ ಯುವತಿಯರು:
ಗ್ರಾಹಕರು ತಮ್ಮ ಚಿನ್ನವನ್ನು ಮರಳಿ ಕೇಳಲು ಪ್ರಾರಂಭಿಸಿದಾಗ, ಯುವತಿಯರು ಬೇರೆಡೆ ಸಾಲ ಮಾಡಿ ಚಿನ್ನವನ್ನು ಖರೀದಿಸಿ ಗ್ರಾಹಕರಿಗೆ ನೀಡಬೇಕಾಯಿತು. ದಿನಕಳೆದಂತೆ ಸಾಲದ ಹೊರೆ ವಿಪರೀತವಾಗಿ ಹೆಚ್ಚಾದಾಗ, ಇಬ್ಬರೂ ತೀವ್ರ ಮಾನಸಿಕ ನೆಮ್ಮದಿ ಕಳೆದುಕೊಂಡು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯುವತಿಯರ ಸಾವಿನ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಸಿಂಧು ಕುಮಾರಿಯನ್ನು ವಿಝಿಂಜಂ ಪೊಲೀಸರು ಸಂಬಂಧಿಕರ ಮನೆಯೊಂದರಿಂದ ಬಂಧಿಸಿದ್ದಾರೆ. ಆರೋಪಿಯ ಮನೆಯಿಂದ ನಕಲಿ ವಿಸಿಟಿಂಗ್ ಕಾರ್ಡ್ಗಳು ಮತ್ತು ಬಿಲ್ ಬುಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಂಧು ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚಿಸಿದ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
(ಗಮನಿಸಿ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮಗೆ ಅಥವಾ ನಿಮ್ಮ ಪರಿಚಯಸ್ಥರಿಗೆ ಮಾನಸಿಕ ನೆಮ್ಮದಿಯ ಅಗತ್ಯವಿದ್ದರೆ ತಕ್ಷಣ ಸಹಾಯವಾಣಿಗಳನ್ನು ಸಂಪರ್ಕಿಸಿ).
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























