12:41 AM Saturday 23 - August 2025

ಉತ್ತರಪ್ರದೇಶದಲ್ಲಿ ಮದ್ರಸಾಗಳ ವಿರುದ್ಧ ವಿದೇಶಿ ದೇಣಿಗೆ ಪಡೆದ ಆರೋಪ: ಎಸ್ ಐಟಿ ತನಿಖೆ ನಡೆಸಿ ಎಂದ ಸಿಎಂ ಯೋಗಿ

24/10/2023

ಉತ್ತರಪ್ರದೇಶ ರಾಜ್ಯದ ಮದ್ರಸಾಗಳ ವಿರುದ್ಧ ವಿದೇಶದಿಂದ ಹಣ ಪಡೆಯುತ್ತಿದೆ ಎಂಬ ಆರೋಪ ಹೊರಿಸಲಾಗಿದೆ. ಈ ಕುರಿತಂತೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದ್ದು ಹೆಚ್ಚುವರಿ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡ ಅಂದರೆ ಎಸ್‌ಐಟಿಯನ್ನು ರಚಿಸಿದೆ.

ಯುಪಿಯಲ್ಲಿ ಸುಮಾರು 25,000 ಮದ್ರಸಾಗಳಿದ್ದು, ಅದರಲ್ಲಿ 16,500 ಕ್ಕೂ ಹೆಚ್ಚು ಮದ್ರಸಾಗಳು ಶಿಕ್ಷಣ ಮಂಡಳಿಯಿಂದ ಅಂಗೀಕರಿಸಲ್ಪಟ್ಟಿದೆ.

“ವಿದೇಶಿ ನಿಧಿಯ ಮೂಲಕ ಪಡೆದ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಹಣವನ್ನು ಮದ್ರಸಾಗಳನ್ನು ನಡೆಸಲು ಬಳಸಲಾಗುತ್ತಿದೆಯೇ ಅಥವಾ ಯಾವುದೇ ಇತರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆಯೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ” ಎಂದು ಎಟಿಎಸ್ ಹೆಚ್ಚುವರಿ ಮಹಾನಿರ್ದೇಶಕ ಮೋಹಿತ್ ಅಗರ್ ವಾಲ್ ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕಿ ಜೆ ರೀಭಾ ಮತ್ತು ಸೈಬರ್ ಸೆಲ್ ಎಸ್‌ಪಿ ತ್ರಿವೇಣಿ ಸಿಂಗ್ ಅವರು ಎಸ್‌ಐಟಿಯ ಇತರ ಸದಸ್ಯರಾಗಿದ್ದಾರೆ. ಇಂಡೋ-ನೇಪಾಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಮದ್ರಸಾಗಳ ಮೇಲೆ ತನಿಖಾ ಸಂಸ್ಥೆ ಹೆಚ್ಚು ಗಮನಹರಿಸಲಿದೆ.

ತನಿಖೆಯನ್ನು ಪೂರ್ಣಗೊಳಿಸಲು ಸರ್ಕಾರ ಯಾವುದೇ ಸಮಯದ ಗಡುವನ್ನು ಇನ್ನೂ ನೀಡಿಲ್ಲ. ನೋಂದಾಯಿತ ಮತ್ತು ನೋಂದಾಯಿತವಲ್ಲದ ಎರಡೂ ಮದ್ರಸಾಗಳು ತನಿಖೆಯ ಭಾಗವಾಗಿರುತ್ತವೆ ಎಂದು ಅಗರ್‌ವಾಲ್‌ ಹೇಳಿಕೆ ನೀಡಿದರು.

ಇತ್ತೀಚಿನ ಸುದ್ದಿ

Exit mobile version