12:54 AM Tuesday 9 - September 2025

ಉಪ ರಾಷ್ಟ್ರಪತಿ ಚುನಾವಣೆ: ಸಂಜೆ ವೇಳೆ ಫಲತಾಂಶ ಪ್ರಕಟ

vice president poll
09/09/2025

ನವದೆಹಲಿ: ಇಂದು ಉಪ ರಾಷ್ಟ್ರಪತಿ ಚುನಾವಣೆ  ನಡೆಯುತ್ತಿದ್ದು, ಮತದಾನ ಸಾಗುತ್ತಿದೆ. ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದರು.

ಪ್ರಧಾನಿ ಮೋದಿ ಅವರ ಜೊತೆಗೆ ಕೇಂದ್ರ ಸಚಿವ ಕಿರಣ್​ ರಿಜಿಜು, ಅರ್ಜುನ್​ ರಾಮ್​ ಮೇಘವಾಲ್​​, ಜಿತೇಂದ್ರ ಸಿಂಗ್​ ಮತ್ತು ಎಲ್.​ ಮುರುಗನ್​ ಮತದಾನ ಮಾಡಿದರು. ಸಂಸತ್​ ಭವನದಲ್ಲಿನ ವಸುಧಾ ಕೋಣೆ ಸಂಖ್ಯೆ 101ರಲ್ಲಿ ಮತಚಲಾವಣೆ ನಡೆಯಿತು.

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಮೇಘವಾಲ್, ಪ್ರಹ್ಲಾದ್ ಜೋಶಿ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್, ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ನಾಸರ್ ಹುಸೇನ್ ಕೂಡ ಮತದಾನದ ಆರಂಭದಲ್ಲೇ ತಮ್ಮ ಮತ ಚಲಾಯಿಸಿದರು.

92 ವರ್ಷದ ದೇವೇಗೌಡ ಅವರು ವೀಲ್​ ಚೇರ್​ ನಲ್ಲಿ ಬಂದು ಮತದಾನ ಮಾಡಿದರು, ಕೇಂದ್ರ ಸಚಿವ ನಿತೀನ್​ ಗಡ್ಕರಿ ಮತ್ತು ಕಾಂಗ್ರೆಸ್​ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನಡೆದು ಬಂದು ಮತಗಟ್ಟೆ ನಿಗದಿಯಾಗಿರುವ ಕೋಣೆಯಲ್ಲಿ ವೋಟಿಂಗ್​ ಮಾಡಿದರು.  ಜಗದೀಪ್​ ಧನಕರ್​ ಅವರ ದಿಢೀರ್​ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ ಎನ್‌ ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಮತ್ತು ಇಂಡಿಯಾ ಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಉಪರಾಷ್ಟ್ರಪತಿ ಚುನಾವಣೆಗೆ 788 ಸದಸ್ಯರು ಮತ ಚಲಾಯಿಸುವ ಅಧಿಕಾರ ಹೊಂದಿದ್ದು, ರಾಜ್ಯಸಭೆಯಿಂದ 245 ಮತ್ತು ಲೋಕಸಭೆಯಿಂದ 543. ರಾಜ್ಯಸಭೆಯ 12 ನಾಮ ನಿರ್ದೇಶಿತ ಸದಸ್ಯರು ಸಹ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ರಹಸ್ಯ ಮತದಾನದ ಮೂಲಕ ಈ ಚುನಾವಣೆ ಸಾಗಲಿದೆ.  ರಾಜ್ಯಸಭೆಯಲ್ಲಿ ಆರು ಸ್ಥಾನಗಳು ಮತ್ತು ಲೋಕಸಭೆಯಲ್ಲಿ ಒಂದು ಸ್ಥಾನ ಖಾಲಿ ಇರುವುದರಿಂದ ಸದಸ್ಯರ ಪ್ರಸ್ತುತ ಬಲ 781 ಆಗಿದೆ. ಬಹುಮತಕ್ಕೆ 391 ಸ್ಥಾನಗಳು ನಿಗದಿಯಾಗಿವೆ. ಎನ್‌ ಡಿಎ 425 ಸಂಸದರನ್ನು ಹೊಂದಿದ್ದರೆ, ವಿರೋಧ ಪಕ್ಷವು 324 ಸಂಸದರ ಬೆಂಬಲವನ್ನು ಹೊಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version