ಲೈಂಗಿಕ ಸಮಸ್ಯೆಗೆ ಪರಿಹಾರದ ಹೆಸರಿನಲ್ಲಿ ವಂಚನೆ: ವಿಜಯ್ ಗುರೂಜಿ ಬಂಧನ!

vijay guruji
02/12/2025

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಐಟಿ ಉದ್ಯೋಗಿಗೆ ವಂಚಿಸಿದ ಆರೋಪದಲ್ಲಿ ವಿಜಯ್ ಗುರೂಜಿ ಎಂಬಾತನನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ನೀಡುವ ನೆಪದಲ್ಲಿ ಟೆಕ್ಕಿಗೆ  48 ಲಕ್ಷ ರೂಪಾಯಿ ವಂಚಿಸಿದ ಆರೋಪ ಈತನ ಮೇಲಿದೆ. ತೇಜಸ್ ಎಂಬ ಟೆಕ್ಕಿ ಈ ಗುರೂಜಿಯಿಂದ ವಂಚನೆಗೊಳಗಾಗಿದ್ದರು.

ತೇಜಸ್ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಬರುತ್ತಿದ್ದರು. ಈ ವೇಳೆ  ರಸ್ತೆ ಪಕ್ಕದ ಟೆಂಟ್‌ ನಲ್ಲಿ ‘‘ಲೈಂಗಿಕ ಸಮಸ್ಯೆಗೆ ಚಿಕಿತ್ಸೆ’’ ಎಂಬ ಬೋರ್ಡ್ ನೋಡಿ ಒಳಗೆ ಹೋಗಿದ್ದರು. ಅಲ್ಲಿ ಭೇಟಿಯಾದ ವ್ಯಕ್ತಿ ವಿಜಯ್ ಗುರೂಜಿಯನ್ನು ಪರಿಚಯಿಸಿ, ಆಯುರ್ವೇದಿಕ್ ಚಿಕಿತ್ಸೆ ಮೂಲಕ ಸಮಸ್ಯೆ ಗುಣವಾಗುತ್ತದೆ ಎಂದು ಭರವಸೆ ನೀಡಿದ್ದರು.

ತೇಜಸ್ ನಂತರ ಟೆಂಟ್‌ ಗುರೂಜಿಯನ್ನು ಭೇಟಿಯಾಗಿ ‘ದೇವರಾಜ್ ಬೂಟಿ’ ಎಂಬ 1 ಗ್ರಾಂ ಔಷಧಿಗೆ 1.60 ಲಕ್ಷ ರೂ. ದರ ಫಿಕ್ಸ್ ಮಾಡಲಾಗಿತ್ತು. ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್‌ ಗೆ ಹೋಗಿ ಮಾತ್ರೆಗಳು ಮತ್ತು ‘ದೇವರಾಜ್ ಬೂಟಿ’ಯನ್ನು ಖರೀದಿಸುವಂತೆ ಸೂಚಿಸಲಾಗಿತ್ತು. ಆನ್‌ಲೈನ್ ಪೇಮೆಂಟ್ ಮಾಡಬಾರದು, ಯಾರನ್ನೂ ಜೊತೆಗೆ ಕರೆದುಕೊಂಡು ಬರಬಾರದು ಎಂದು ಕಟ್ಟುನಿಟ್ಟಿನ ಷರತ್ತು ಹಾಕಲಾಗಿತ್ತು. ತೇಜಸ್ ಒಂದೇ ಬಾರಿಗೆ ಅಲ್ಲ, ಹಲವಾರು ಬಾರಿ ‘ದೇವರಾಜ್ ಬೂಟಿ’ ಮತ್ತು ‘ಭವನ ಬೂಟಿ ತೈಲ’ಗಳನ್ನು ಖರೀದಿಸುತ್ತಾ ಒಟ್ಟಿನಲ್ಲಿ 48 ಲಕ್ಷ ರೂ. ಖರ್ಚು ಮಾಡಿದ್ದರು.

ಆದರೆ, ಔಷಧಿ ಸೇವಿಸಿದರೂ ಲೈಂಗಿಕ ಸಮಸ್ಯೆ ಪರಿಹಾರವಾಗದೇ, ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ತೇಜಸ್ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಗಂಭೀರ ಸಮಸ್ಯೆ ಉಂಟಾಗಿದೆ ಎಂಬುದು ಪತ್ತೆಯಾಯಿತು. ಆಯುರ್ವೇದಿಕ್ ಮಿಶ್ರಣವೇ ಕಿಡ್ನಿ ಹಾನಿಗೆ ಕಾರಣ ಎಂದು ವೈದ್ಯರು ಸೂಚಿಸಿದ್ದಾರೆ. ತೇಜಸ್ ಚಿಕಿತ್ಸೆ ಪರಿಣಾಮಕಾರಿಯಲ್ಲ ಎಂದು ಪ್ರಶ್ನಿಸಿದಾಗ ವಿಜಯ್ ಗುರೂಜಿ ‘ಸಮಸ್ಯೆ ಇನ್ನೂ ಹೆಚ್ಚಾಗುವಂತೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version