11:01 PM Tuesday 14 - October 2025

ನನ್ನ ಒಲಿಂಪಿಕ್ ಸೋಲನ್ನು ನೋಡಿ ಸಂತೋಷವಾಗಿರುವವರನ್ನು ದೇಶದ್ರೋಹದ ವಿಚಾರಣೆಗೆ ಒಳಪಡಿಸಬೇಕು: ವಿನೇಶ್ ಫೋಗಟ್ ಕಿಡಿ

08/09/2024

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಸೋಲನ್ನು ನೋಡಿ ಸಂತೋಷಗೊಂಡವರನ್ನು ದೇಶದ್ರೋಹದ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಬೇಕು ಎಂದು ಕುಸ್ತಿಪಟು-ರಾಜಕಾರಣಿ ವಿನೇಶ್ ಫೋಗಟ್ ಹೇಳಿದ್ದಾರೆ.
ವಿನೇಶ್ ಫೋಗಟ್ ಅವರು ಆಗಸ್ಟ್ 6 ರಂದು ಕಾಂಗ್ರೆಸ್ ಗೆ ಸೇರಿದ್ದರು. ಅಲ್ಲದೇ ಹರಿಯಾಣ ವಿಧಾನಸಭಾ ಚುನಾವಣೆಗೆ ಜುಲಾನಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು.

ಭಾನುವಾರ ಜುಲಾನಾದಲ್ಲಿ ತನ್ನ ಮೊದಲ ರಾಜಕೀಯ ರ್ಯಾಲಿಯನ್ನು ನಡೆಸಿದ ನಂತರ ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡಿದ ಫೋಗಟ್, ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಹರಿಯಾಣದ ಮಾಜಿ ಸಚಿವ ಅನಿಲ್ ವಿಜ್ ಅವರ ಇತ್ತೀಚಿನ ಹೇಳಿಕೆಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು.

“ಅನೇಕ ವರ್ಷಗಳಿಂದ ಬಿಜೆಪಿ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ನಾನು ಒಲಿಂಪಿಕ್ಸ್‌ನಲ್ಲಿ ಗೆಲ್ಲಲಿಲ್ಲ ಎಂದು ಅವರು ಸಂತೋಷವಾಗಿದ್ದಾರೆ ಎಂದು ಹೇಳುತ್ತಿದ್ದರೆ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಆ ಪದಕ ನನಗೆ ಸೇರಿದ್ದಲ್ಲ, ಇಡೀ ದೇಶಕ್ಕೆ ಸೇರಿದ್ದಾಗಿದೆ. ಅವರು ದೇಶಕ್ಕೆ ಅಗೌರವ ತೋರಿದ್ದಾರೆ “ಎಂದು ಟೀಕಿಸಿದರು.

ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, “ದೇವರು ಅವಳನ್ನು ಶಿಕ್ಷಿಸಿದ್ದರಿಂದ” ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದ ನಂತರ ವಿನೇಶ್ ಫೋಗಟ್ ಅವರ ಈ ಹೇಳಿಕೆ ಬಂದಿದೆ.

ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ, ವಿನೇಶ್ ಫೋಗಟ್ ಒಲಿಂಪಿಕ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು‌. ಆದರೆ ಆಕೆಯ 50 ಕಿಲೋಗ್ರಾಂ ತೂಕದ ವಿಭಾಗದಲ್ಲಿ ಸುಮಾರು 100 ಗ್ರಾಂ ಅಧಿಕ ತೂಕ ಕಂಡುಬಂದ ನಂತರ ಆಕೆಯನ್ನು ಅನರ್ಹಗೊಳಿಸಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version