ಮತದಾನದ ನಡುವೆ ಸಾವು ನೋವು: ಮತಗಟ್ಟೆಯಲ್ಲಿ ಕುಡುಕನ ಕಿರಿಕ್, ಪತಿಯ ಸಾವಿನ ನೋವಿನಲ್ಲೂ ಮತದಾನ

ಶಿವಮೊಗ್ಗ: ಮತ ಹಾಕಲು ತೆರಳುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್(32) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಮತ ಚಲಾಯಿಸಲು ತೆರಳುತ್ತಿದ್ದ ವೇಳೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಮಂಜುನಾಥ್ ಸಾವನ್ನಪ್ಪಿದ್ದಾರೆ.
ಮತ್ತೊಂದು ಘಟನೆಯಲ್ಲಿ ಸೊರಬ ತಾಲೂಕಿನ ಕುಂಸಿ ಗ್ರಾಮದಲ್ಲಿ ಮತದಾನದ ಬಳಿಕ ಹೃದಯಘಾತದಿಂದ ವೃದ್ಧೆ ಮಲ್ಲಮ್ಮ (96) ಸಾವನ್ನಪ್ಪಿದ್ದಾರೆ.
ಕುಡುಕನ ಕಿರಿಕ್:
ಕುಡಿದು ಮತಚಲಾಯಿಸಲು ಬಂದ ಮತದಾರನೊಬ್ಬ ಚುನಾವಣಾ ಸಿಬ್ಬಂದಿಯ ಜೊತೆಗೆ ಜಗಳಕ್ಕೆ ನಿಂತ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ 154 ನಂಬರ್ ನ ಮತಗಟ್ಟೆಯಲ್ಲಿ ನಡೆಯಿತು.
ಮತದಾನ ಮಾಡುವ ವೇಳೆ ಇವಿಎಂ ಯಂತ್ರ ಸದ್ದು ಮಾಡಿಲ್ಲ ಎಂದು ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ಮತಗಟ್ಟೆಯಿಂದ ಹೊರಕ್ಕೆ ಕಳಿಸಿದ್ದಾರೆ. ಈ ವೇಳೆ ತೂರಾಡಿ ಬಿದ್ದು ಗಾಯವಾಗಿದೆ.
ಪತಿಯ ಸಾವಿನ ನೋವಿನಲ್ಲೂ ಮತದಾನ:
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆಡುಗೋಡಿಯಲ್ಲಿ ವೆಂಕಟೇಶ್ ಅನಾರೋಗ್ಯದ ಕಾರಣ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮತ ಹಾಕುವ ಮೊದಲು ಪತಿಯ ಸಾವಿನ ವಿಷಯ ತಿಳಿದ ಕಲಾವತಿ ಎಂಬುವವರು ಮತ ಹಾಕಿ ಬಳಿಕ ಪತಿಯ ಮೃತದೇಹ ನೋಡಲು ತೆರಳಿದ್ದಾರೆ.