ಚುನಾವಣಾ ಬಾಂಡ್ ಪ್ರಕರಣ: ಪ್ರಧಾನಿ ಮೋದಿ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರು

ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಮತ್ತೆ ಮುಗಿಬಿದ್ದಿರುವ ಕಾಂಗ್ರೆಸ್, ಅವರ ಮೌನವನ್ನು ಪ್ರಶ್ನಿಸಿದೆ. ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸುದೀರ್ಘ ಟ್ವೀಟ್ ಮಾಡಿದ್ದು, “ಆಶ್ಚರ್ಯಕರ ಎಂಬಂತೆ ಪ್ರಧಾನಿಯವರು ಬುಧವಾರ ನವದೆಹಲಿಯಲ್ಲೇ ನೆಲೆಸಿದ್ದಾರೆ. ಆದರೆ ಉದ್ಘಾಟನೆಗಳಿಗೆ, ಮರುಬ್ರಾಂಡಿಂಗ್‌ಗೆ ಅಥವಾ ಹಿಂದಿನ ಕೆಲಸಕ್ಕಾಗಿ ಕ್ರೆಡಿಟ್ ಪಡೆಯಲು ಮೋದಿಯವರು ಪ್ರವಾಸ ಮಾಡುತ್ತಿಲ್ಲ ಯಾಕೆ? ಎಂದು ಕೇಳಿದ್ದಾರೆ.
ಈಗ ರದ್ದಾಗಿರುವ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಸಂಸ್ಥೆಗಳು ಮತ್ತು ಅವುಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಒಂದು ದಿನದ ಅನಂತರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ನಲ್ಲಿ ಸರಣಿ ಪ್ರಶ್ನೆ ಕೇಳಿರುವ ಜೈರಾಮ್ ರಮೇಶ್, ಯಾವ ರಾಜಕೀಯ ಪಕ್ಷಕ್ಕೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸುವುದನ್ನು ತಡೆಯಲು ಅಥವಾ ವಿಳಂಬ ಮಾಡಲು ಮೋದಿ ಸರ್ಕಾರವು ಎಸ್‌ಬಿಐ ಮೂಲಕ ಸತತವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದು, ಪ್ರಧಾನ ಮಂತ್ರಿ ಯಾಕಾಗಿ ಹೆದರುತ್ತಿದ್ದಾರೆ..? ಚುನಾವಣಾ ಬಾಂಡ್‌ಗಳ ಅಂಕಿ-ಅಂಶಗಳು ಯಾವ ಹೊಸ ಹಗರಣವನ್ನು ಬಹಿರಂಗಪಡಿಸುತ್ತವೆ ಎಂದೋ? ಅವರು ಕೇಳಿದ್ದು, ತಮ್ಮ ಸರ್ಕಾರವು ಮೂಲಭೂತ ಜವಾಬ್ದಾರಿಗಳ ಬಗ್ಗೆಯೂ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
“ಇಡಿ, ಸಿಬಿಐ ಅಥವಾ ಐಟಿ ಇಲಾಖೆಯಿಂದ ದಾಳಿ ಅಥವಾ ತನಿಖೆ ನಡೆಸಿದ ಬಳಿಕ 30 ಕಂಪನಿಗಳಿಂದ ೩೩೫ ಕೋಟಿ ದೇಣಿಗೆಗಳು ಬಂದಿದೆ. ಇವುಗಳು ಬಿಜೆಪಿಗೆ ಏಕೆ ದೇಣಿಗೆ ನೀಡಿವೆ? ಇಡಿ-ಸಿಬಿಐ-ಐಟಿ ತನಿಖೆಯ ಬೆದರಿಕೆಯ ಮೂಲಕ ಬಿಜೆಪಿ ಈ ಸಂಸ್ಥೆಗಳನ್ನು ಬೆದರಿಸಿ ಅವರಿಂದ ದೇಣಿಗೆ ವಸೂಲಿ ಮಾಡುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth