ಕಾಂಗ್ರೆಸ್‌ ನ ಗ್ಯಾರೆಂಟಿ ಯೋಜನೆಗಳು ರದ್ದಾಗುತ್ತವೆಯೇ?

siddaramaiah dk shivakumar
07/06/2024

ರಾಜ್ಯದಲ್ಲಿ ಜನರಿಗೆ ಗ್ಯಾರೆಂಟಿ ನೀಡಿದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ, ಜನರಿಗೆ ಇಷ್ಟವಿಲ್ಲದ ಗ್ಯಾರೆಂಟಿಗಳನ್ನು ರದ್ದು ಮಾಡಬೇಕು ಎನ್ನುವ ಒತ್ತಾಯ ಸದ್ಯ ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧೆಡೆಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಕಾಂಗ್ರೆಸ್‌ ಇಟ್ಟುಕೊಂಡಿತ್ತು. ಆದರೆ 9 ಕ್ಷೇತ್ರಗಳಲ್ಲಿ ಮಾತ್ರವೇ ಕಾಂಗ್ರೆಸ್‌ ಗೆಲುವು ಸಾಧಿಸಲು ಸಾಧ್ಯವಾಯಿತು. ಕಳೆದ ಬಿಜೆಪಿ ಸರ್ಕಾರ ತನ್ನ ಯಾವುದೇ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದೇ, ಹಲಾಲ್‌, ಹಿಜಾಬ್‌, ಅನೈತಿಕ ಪೊಲೀಸ್‌ ಗಿರಿ ವಿವಾದಗಳನ್ನು ಬೆಳೆಸಿತು. ಆದರೆ ಕಾಂಗ್ರೆಸ್‌ ಸರ್ಕಾರ ಜನರ ಆರ್ಥಿಕ ಸಬಲಿಕರಣಕ್ಕಾಗಿ ಗ್ಯಾರೆಂಟಿಗಳನ್ನು ಜಾರಿಗೊಳಿಸಿತು. ಆದರೂ ಮತದಾರರು ಕೇವಲ ಜಾತಿ, ಧರ್ಮಗಳ ಮಾನಸಿಕತೆಗೆ ಸೀಮಿತವಾಗಿದ್ದಾರೆ. ಇವರಿಗೆ ಗ್ಯಾರೆಂಟಿಯ ಅವಶ್ಯಕತೆ ಇದೆಯೇ? ಎನ್ನುವ ಪ್ರಶ್ನೆಗಳನ್ನು ಕಾಂಗ್ರೆಸ್‌ ಪರ ನಿಲುವಿನ ಸಾರ್ವಜನಿಕರು ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.

ಈಗ ಜನರು ನೀಡಿರುವ ತೀರ್ಪು, ರಾಜ್ಯದ ಜನರಿಗೆ ಗ್ಯಾರೆಂಟಿಯ ಅವಶ್ಯಕತೆ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. ಹಾಗಾಗಿ ಇದನ್ನು ರದ್ದುಪಡಿಸಬೇಕು ಎನ್ನುವ ವಾದಗಳು ಕೂಡ ಕೇಳಿ ಬಂದಿದೆ.

ಸರ್ಕಾರ ತೀರ್ಮಾನಿಸಿಲ್ಲ:

ಗ್ಯಾರೆಂಟಿ ರದ್ದು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕವಾಗಿ ಕೇಳಿ ಬಂದಿದೆಯೇ ಹೊರತು, ಈ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. 5 ವರ್ಷಗಳ ಕಾಲ ಗ್ಯಾರೆಂಟಿಯನ್ನು ನೀಡುತ್ತೇವೆ ಎಂದು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಘೋಷಿಸಿತ್ತು. ಅಂತೆಯೇ ಕ್ರಮಬದ್ಧವಾಗಿ ಈಗಿನ ವರೆಗೂ ಗ್ಯಾರೆಂಟಿ ಯೋಜನೆಗಳನ್ನು ತಲುಪಿಸುತ್ತಿದೆ. ಗ್ಯಾರೆಂಟಿಗಳನ್ನು ನಿಲ್ಲಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಹೇಳಲಾಗಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಡಿಮೆ ಸ್ಥಾನಗಳಿಸಿರುವುದರಿಂದ ಇಂತಹದ್ದೊಂದು ಚರ್ಚೆ ಸೃಷ್ಟಿಯಾಗಿದೆ.

ರಾಜ್ಯದಲ್ಲಿ ಚೇತರಿಸಿಕೊಂಡ ಕಾಂಗ್ರೆಸ್:‌

ಇನ್ನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಕಣಕ್ಕಿಳಿದಿತ್ತು. ಈ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್‌ ಹಾಗೂ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಮಾತ್ರ ಗೆಲುವು ಪಡೆದಿದ್ದರು. ಕಾಂಗ್ರೆಸ್‌ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಜೆಡಿಎಸ್‌ ಮೈತ್ರಿಗೆ ಉತ್ತಮ ಪ್ರತಿಸ್ಪರ್ಧೆ ಒಡ್ಡಿದೆ. ಅಲ್ಲದೇ 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಚೇತರಿಸಿಕೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JuQTBF5KG6PG6v5YZnySxb

ಇತ್ತೀಚಿನ ಸುದ್ದಿ

Exit mobile version