ಮಚ್ಚು ಕೊಡಲಿ ಹಿಡಿಯುವವರನ್ನು ಮಂತ್ರಿ ಮಾಡಿಕೊಂಡಿದ್ದೀರಲ್ಲಾ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕಿಡಿ

h.d kumaraswamy
12/09/2023

ಬೆಂಗಳೂರು: ದಲಿತರಿಗೆ ಧಮ್ಕಿ ಹಾಕಿ ದೌರ್ಜನ್ಯ ಎಸಗಿಸಿದ ಆರೋಪ ಎದುರಿಸುತ್ತಿರುವ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; ದಲಿತರ ರಕ್ಷಣೆ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಈ ಸರಕಾರದಲ್ಲಿ ಏನಾಗುತ್ತಿದೆ? ಸಚಿವರೇ ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಂಥ ವ್ಯಕ್ತಿಯನ್ನು ಸಂಪುಟದಲ್ಲಿ ಇರಿಸಿಕೊಳ್ಳಬಾರದು ಎಂದರು.

ಎಫ್ ಐ ಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ:

ಸಿದ್ದರಾಮಯ್ಯನವರೇ ನೀವು ಬೇರೆ ಪಕ್ಷದವರಿಗೆ ಮಾನ ಮರ್ಯಾದೆ ಇದೆಯಾ ಅಂತ ಕೇಳ್ತಾ ಇರ್ತೀರಲ್ಲ, ಅಲ್ಲವೇ? ನಿಮಗೆ ಏನಿದೆ ಅಂತ ನಾನು ಕೇಳಲು ಬಯಸುತ್ತೇನೆ. ಎಫ್ ಐ ಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳ ಮೇಲೆಯೇ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಿರಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಪ್ರಶ್ನಿಸಿದರು.

ಅಧಿಕಾರಿಗಳನ್ನು ಬಹಳ ಕೀಳಾಗಿ ನಡೆಸಿಕೊಳ್ಳುತ್ತಿದ್ದೀರಿ. ಎಫ್ ಐ ಆರ್ ದಾಖಲಿಸಿದ ಅಧಿಕಾರಿಯನ್ನು ದಾಖಲೆಗಳನ್ನು ತೆಗೆದುಕೊಂಡು ಮನೆಗೆ ಬಾ ಅಂತ ಬೆದರಿಕೆ ಹಾಕುತ್ತೀರಿ. ಇದಾ ದಲಿತರ ರಕ್ಷಣೆ? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಈ ಭೂಮಿ ಪ್ರಕರಣ ಮುಗಿದೇ ಹೋಗಿತ್ತು. ಈಗ ಕಾನೂನುಬದ್ದವಾಗಿ ಜೀವ ಕೊಟ್ಟಿದ್ದಾರೆ. ಎಲ್ಲದಕ್ಕೂ ತನಿಖೆ ತನಿಖೆ ಅಂತ ಹೇಳ್ತೀರಲ್ಲಾ, ಇದಕ್ಕೆ ಯಾವ ತನಿಖೆ ಮಾಡುತ್ತೀರಾ? ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮೇಲೆ ಕಾಗದದ ಚೂರು ಎಸೆದರು ಎಂದು ನೀವೆಲ್ಲಾ ಉದ್ದುದ್ದ ಬಾಷಣ ಮಾಡಿದ್ದರಲ್ಲ ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ ಅವರೇ.. ಇವತ್ತು ಆ ದಲಿತ ಸಮುದಾಯದ ಹೆಣ್ಣು ಮಗಳ ಮೇಲೆ ಮಚ್ವು ಕೊಡಲಿ ಹಿಡಿದು ಬೆದರಿಸಲು ಹೊರಟಿದ್ದೀರಲ್ಲಾ? ಜನ ಇದಕ್ಕೆನಾ ನಿಮಗೆ ಮತ ಹಾಕಿದ್ದು ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮಚ್ವು , ಕೊಡಲಿ, ಕತ್ತಿ ಹಿಡಿಯುವವರನ್ನು ಮಂತ್ರಿ ಮಾಡಿಕೊಂಡಿದ್ದೀರಲ್ಲಾ, ದಲಿತರ ಪರ ಕಾಳಜಿ ಇರುವ ವಿಧೇಯಕವನ್ನು ಬೇರೆ ಬೇರೆ ಸದನದಲ್ಲಿ ಪಾಸ್ ಮಾಡಿಕೊಂಡಿದ್ದೀರಲ್ಲ, ಕಸದ ಬುಟ್ಟಿಗೆ ಹಾಕಲಿಕ್ಕೆ ಆ ಬಿಲ್ ಅನ್ನು ಪಾಸ್ ಮಾಡಿಕೊಂಡಿದ್ದೀರಾ? ತಕ್ಷಣ ನಿಮ್ಮ ಮಂತ್ರಿಯನ್ನು ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಅವರು ಒತ್ತಾಯ ಮಾಡಿದರು.

ನಾವು ಟೀಕೆ ಮಾಡಿದರೆ ಅಸೂಯೆ ಅಂತಾರೆ. ಇಂತಹ ಕೆಲಸ ಮಾಡಿದರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ? ಹೀಗೆನಾ ನೀವು ದಲಿತರನ್ನು ಉದ್ದಾರ ಮಾಡುವುದು ಎಂದ ಅವರು; ಇದು ದಲಿತ ವಿರೋಧಿ, ಜನವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ದಲಿತ ಸಂಘಟನೆಗಳಿಗೂ ನಾನು ಮನವಿ ಮಾಡುತ್ತೇನೆ. ಅವರೂ ಇದನ್ನು ಗಮನಿಸಲಿ. ಅವರು ಈ ಅನ್ಯಾಯವನ್ನು ನೋಡಿಕೊಂಡು ಸುಮ್ಮನೆ ಇರಬಾರದು. ಈ ಮಂತ್ರಿಯ ವಿರುದ್ಧ ಹೋರಾಟ ನಡೆಸಬೇಕು ಎಂದರು ಮಾಜಿ ಮುಖ್ಯಮಂತ್ರಿಗಳು

ಇತ್ತೀಚಿನ ಸುದ್ದಿ

Exit mobile version