4:33 AM Thursday 16 - October 2025

ಜಯಲಲಿತಾ ಆಪ್ತೆ ಶಶಿಕಲಾಗೆ ಸೇರಿದ 2000 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ

07/10/2020

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾಗೆ ಸೇರಿದ 2000 ಕೋಟಿ ರೂ.ಮೌಲ್ಯದ ಸ್ವತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಜಪ್ತಿ ಮಾಡಿದ್ದಾರೆ.

ಬೇನಾಮಿ ಆಸ್ತಿ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಿರುಥಾವೂರ್ ಮತ್ತು ಕೊಡನಾಡುವಿನಲ್ಲಿರುವ 300 ಕೋಟಿ ರೂ.ಮೌಲ್ಯದ ಆಸ್ತಿಯೂ ಜಪ್ತಿ ಮಾಡಲಾಗಿದೆ. ಇಂದು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದ ಎಲ್ಲಾ ಆಸ್ತಿಗಳು ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಹೆಸರಿನಲ್ಲಿ ಇವೆ.

ಐಟಿ ಇಲಾಖೆಯ ಬೇನಾಮಿ ನಿಷೇಧ ದಳ ಜಪ್ತಿ ಮಾಡಿದ ಆಸ್ತಿಗಳ ಮೇಲೆ ಮುಟ್ಟುಗೋಲು ನೋಟಿಸ್ ಹಾಕಿದೆ. ಒಟ್ಟಾರೆ 2000 ಕೋಟಿ ರೂ.ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ, ನಾಲ್ಕು ವರ್ಷಗಳ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ನಂತರ ವಾಸವಾಗಿರಬೇಕೆಂದುಕೊಂಡಿದ್ದ ಬಂಗಲೆಯನ್ನು ಕೂಡಾ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡು, ಪುದುಚೇರಿಯಲ್ಲಿ ಶಶಿಕಲಾ ಹಾಗೂ ಅವರ ಪತಿ ನಟರಾಜನ್, ಸಂಬಂಧಿಗಳಿಗೆ ಸೇರಿದ್ದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 1,500 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆ ಪತ್ತೆಯಾಗಿತ್ತು. ಅಲ್ಲದೇ 7 ಕೋಟಿ ರೂಪಾಯಿ ನಗದು, 5 ಕೋಟಿ ಮೌಲ್ಯದ ಆಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಇತ್ತೀಚಿನ ಸುದ್ದಿ

Exit mobile version