ದೇಶದ ಮೊದಲ 3,ಡಿ ಮುದ್ರಿತ ಪೋಸ್ಟ್ ಆಫೀಸ್ ಲೋಕಾರ್ಪಣೆ: ಏನಿದರ ವಿಶೇಷತೆ?

ಬೆಂಗಳೂರು:ನಗರದ ಕೆಂಬ್ರಿಡ್ಜ್ ಲೇಔಟ್‍ನಲ್ಲಿ ದೇಶದ ಮೊದಲ 3ಡಿ-ಮುದ್ರಿತ (3-DPrinted Post Office) ಅಂಚೆ ಕಚೇರಿ ಇಂದು ಲೋಕಾರ್ಪಣೆಯಾಗಿದೆ.
ಇದು ಕೇವಲ 43 ದಿನಗಳಲ್ಲಿ ಪೂರ್ಣಗೊಂಡಿದೆ. ಅದರ ಕಾಮಗಾರಿಯ ಗಡುವಿನ ಎರಡು ದಿನಗಳ ಮುಂಚಿತವಾಗಿ ಕಟ್ಟಡ ಉದ್ಘಾಟನೆಯಾಗಿದೆ. ಕಟ್ಟಡ ತಂತ್ರಜ್ಞಾನ ಮತ್ತು ನಿರ್ಮಾಣ ನಿರ್ವಹಣಾ ವಿಭಾಗ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮನು ಸಂತಾನಂ ಅವರ ಮಾರ್ಗದರ್ಶನದಲ್ಲಿ ಐಐಟಿ ಮದ್ರಾಸ್‍ನಿಂದ ತಾಂತ್ರಿಕ ಬೆಂಬಲದೊಂದಿಗೆ ಲಾರ್ಸೆನ್ ಮತ್ತು ಟೂಬ್ರೊ ಲಿಮಿಟೆಡ್ ಇದರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
ಕಛೇರಿಯು 1,021 ಚದರ ಅಡಿ ಪ್ರದೇಶವನ್ನು ಒಳಗೊಂಡಿದೆ. ಇದು ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದೆ. ಇದರಲ್ಲಿ ರೊಬೊಟಿಕ್ ಪ್ರಿಂಟರ್ ಮೂಲಕ ವಿನ್ಯಾಸ ಮಾಡಲಾಗಿದೆ. ರೋಬೋಟಿಕ್ ತಂತ್ರಜ್ಞಾನದಿಂದ ಸಂಪೂರ್ಣ ನಿರ್ಮಾಣ ಕಾರ್ಯ 43 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು. ಇಲ್ಲವಾಗಿದ್ದರೆ ಸುಮಾರು 6-8 ತಿಂಗಳುಗಳು ತೆಗೆದುಕೊಳ್ಳುತ್ತಿತ್ತು. 23 ಲಕ್ಷ ರೂ. ವೆಚ್ಚದಲ್ಲಿ ಈ ಕಚೇರಿ ನಿರ್ಮಾಣವಾಗಿದೆ. ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ಸುಮಾರು 30-40% ವೆಚ್ಚ ಕಡಿಮೆಯಾಗಿದೆ ಎನ್ನಲಾಗಿದೆ.
ಕಟ್ಟಡವನ್ನು ಕೇಂದ್ರ ರೈಲ್ವೇ ಮತ್ತು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೆಂಗಳೂರು ಯಾವಾಗಲೂ ಭಾರತಕ್ಕೆ ಹೊಸತನ್ನು ಪ್ರಸ್ತುತಪಡಿಸುತ್ತದೆ. ಈ 3ಡಿ ಮುದ್ರಿತ ಅಂಚೆ ಕಚೇರಿ ದೇಶದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು.
ಇದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು,ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಯನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ. ಇದು ಸ್ವಾವಲಂಬಿ ಭಾರತದ ಆತ್ಮವನ್ನು ಒಳಗೊಂಡಿದೆ. ಈ ಕಚೇರಿ ಪೂರ್ಣಗೊಳಿಸಲು ಶ್ರಮಿಸಿದವರಿಗೆ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.