ಮೈಮೇಲೆ ಮಲವಿಸರ್ಜನೆ ಮಾಡಿದನೆಂದು 3 ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದ ತಾಯಿಯ ಪ್ರಿಯಕರ!
ಮುಂಬೈ: ಮಹಾರಾಷ್ಟ್ರದ ಸೋಲಾಪುರದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಮಲಗಿದ್ದಾಗ ಮೈಮೇಲೆ ಮಲವಿಸರ್ಜನೆ ಮಾಡಿದ ಎಂಬ ಕಾರಣಕ್ಕಾಗಿ ಮೂರು ವರ್ಷದ ಮಗುವನ್ನು ತಾಯಿಯ ಪ್ರಿಯಕರನೇ ಹತ್ಯೆ ಮಾಡಿದ್ದಾನೆ.
ಘಟನೆಯ ವಿವರ: ವಿಜಯಪುರ ಮೂಲದ ಶಹನಾಜ್ ಶೇಖ್ ಮತ್ತು ಆಕೆಯ ಲಿವ್–ಇನ್ ಪಾಲುದಾರ ಮೌಲಾಲಿ (ಅಕ್ಬರ್ ರಜಾಕ್) ಕಳೆದ ಒಂದು ತಿಂಗಳಿನಿಂದ ಸೋಲಾಪುರದಲ್ಲಿ ವಾಸವಿದ್ದರು. ಡಿಸೆಂಬರ್ 11ರಂದು ಮೌಲಾಲಿ ಕುಡಿದ ಅಮಲಿನಲ್ಲಿ ಮಲಗಿದ್ದಾಗ, ಪಕ್ಕದಲ್ಲೇ ಮಲಗಿದ್ದ ಶಹನಾಜ್ ಅವರ ಮೂರು ವರ್ಷದ ಮಗ ಫರ್ಹಾನ್ ಆಕಸ್ಮಿಕವಾಗಿ ಮೌಲಾಲಿಯ ಬಟ್ಟೆಯ ಮೇಲೆ ಮಲವಿಸರ್ಜನೆ ಮಾಡಿದ್ದನು. ಇದರಿಂದ ಕೆರಳಿದ ಮೌಲಾಲಿ, ಮಗುವಿನ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕೆಲಸ ಮುಗಿಸಿ ಮನೆಗೆ ಬಂದ ತಾಯಿಗೆ “ಮಗು ಕೆಳಗೆ ಬಿದ್ದು ಏಟಾಗಿದೆ ಎಂದು ಸುಳ್ಳು ಹೇಳಿದ್ದ. ಬಳಿಕ ಮಗುವನ್ನು ವಿಜಯಪುರದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆರೋಪಿ ಬಸ್ ನಿಲ್ದಾಣದಿಂದ ಪರಾರಿಯಾಗಿದ್ದಾನೆ. ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಕತ್ತು ಹಿಸುಕಿರುವುದು ದೃಢಪಟ್ಟಿದೆ.
ಸದ್ಯ ಸೋಲಾಪುರ ಪೊಲೀಸರು ಆರೋಪಿ ಮೌಲಾಲಿಯನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಗು ಮತ್ತು ತಾಯಿ ಮೂಲತಃ ಕರ್ನಾಟಕದ ವಿಜಯಪುರದವರಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























