ಕೇರಳದಲ್ಲಿ ತಮಿಳುನಾಡು ಮೂಲದ ಪ್ರವಾಸಿ ವಾಹನ ಪಲ್ಟಿ: 4 ಸಾವು, 13 ಮಂದಿಗೆ ಗಾಯ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ತಮಿಳುನಾಡಿನಿಂದ ಬಂದ ಪ್ರವಾಸಿ ವಾಹನವೊಂದು ಪಲ್ಟಿಯಾಗಿ ಕಮರಿಗೆ ಬಿದ್ದ ಪರಿಣಾಮ ಒಂದು ವರ್ಷದ ಮಗು ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ವಾಹನದಲ್ಲಿದ್ದ ಇತರ 13 ಪ್ರವಾಸಿಗರು ಗಾಯಗೊಂಡಿದ್ದಾರೆ.
ತಿರುನಲ್ವೇಲಿ ಅಜಂತಾ ಪ್ರೆಶರ್ ಕುಕ್ಕರ್ ಕಂಪನಿ ತನ್ನ ಸಿಬ್ಬಂದಿ ಮತ್ತು ಕುಟುಂಬಗಳಿಗಾಗಿ ಆಯೋಜಿಸಿದ್ದ ಕುಟುಂಬ ಪ್ರವಾಸದ ಸಂದರ್ಭದಲ್ಲಿ ಮಂಗಳವಾರ ಸಂಜೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವಾಸಿಗರು ಮುನ್ನಾರ್ ಮತ್ತು ಅನಕುಲಂಗೆ ಭೇಟಿ ನೀಡಿ ತಮಿಳುನಾಡಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಮೃತರನ್ನು ಅಭಿನೇಶ್ ಮೂರ್ತಿ (40), ಅಭಿನೇಶ್ ಅವರ ಒಂದು ವರ್ಷದ ಮಗ ತನ್ವಿಕ್, ಥೇಣಿ ಮೂಲದ ಗುಣಶೇಖರನ್ (71), ಈರೋಡ್ ಮೂಲದ ಪಿ.ಕೆ.ಸೇತು ಎಂದು ಗುರುತಿಸಲಾಗಿದೆ. ಸದ್ಯ 11 ಜನರು ಆದಿಮಲಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತರ ಇಬ್ಬರನ್ನು ಥೇಣಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.