50 ಸಾವಿರಕ್ಕಿಂತ ಹೆಚ್ಚು ದಂಡಪಾವತಿ ಬಾಕಿಯಿರಿಸಿಕೊಂಡಿದ್ದ 84 ಬೈಕ್‌ 1 ಕಾರು ಪೊಲೀಸ್‌ ವಶಕ್ಕೆ

police
18/02/2024

ಬೆಂಗಳೂರು: ದಕ್ಷಿಣ ಸಂಚಾರ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, 50 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ದಂಡಪಾವತಿ ಬಾಕಿಯಿರಿಸಿಕೊಂಡಿದ್ದ  84 ದ್ವಿಚಕ್ರ ವಾಹನಗಳು ಮತ್ತು 1 ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆದಿರುವ ಈ ವಾಹನಗಳ ಮೇಲೆ 10,210 ಉಲ್ಲಂಘನಾ ಪ್ರಕರಣಗಳು ದಾಖಲಾಗಿದ್ದು‌, ಸುಮಾರು 1.07 ಕೋಟಿ ರೂಪಾಯಿ ದಂಡ ಸಂಗ್ರಹಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ಪೊಲೀಸರ ಬದಲಾಗಿ ಆತ್ಯಾಧುನಿಕ ಕ್ಯಾಮೆರಾಗಳಿಂದ‌ ಸೆರೆಯಾಗುವ ಪೋಟೋ ಆಧಾರದ ಮೇರೆಗೆ ಪ್ರಕರಣಗಳನ್ನ‌ ದಾಖಲಿಸಿಕೊಳ್ಳಲಾಗುತ್ತಿದೆ. ಪೊಲೀಸರು ಅಡ್ಡಗಟ್ಟುವುದಿಲ್ಲ ಎಂದು ಭಾವಿಸಿ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಸೀಟ್ ಬೆಲ್ಟ್ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ.

ಟ್ರಾಫಿಕ್ ವೈಯಲೇಷನ್ ಮಾಡುವವವರ ವಿರುದ್ಧ ಹಾಗೂ ಮುಖ್ಯವಾಗಿ 50 ಸಾವಿರಕ್ಕಿಂತ ಹೆಚ್ಚು ದಂಡ ಹೊಂದಿರುವ ಸವಾರರ ವಿರುದ್ಧ‌ ಕ್ರಮ‌ಕೈಗೊಳ್ಳುವಂತೆ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ.ಎನ್‌.ಅನುಚೇತ್ ನಗರದ ಎಲ್ಲ ವಲಯದ ಡಿಸಿಪಿಗಳಿಗೆ ಸೂಚಿಸಿದ್ದರು.

ಅದರಂತೆ ಕಾರ್ಯಾಚರಣೆ ಕೈಗೊಂಡ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್​ ದೇವರಾಜ್‌ ನೇತೃತ್ವದಲ್ಲಿ ಕಳೆದ 2-3 ದಿನಗಳಿಂದ ಕಾರ್ಯಾಚರಣೆ ಕೈಗೊಂಡು 84 ಬೈಕ್ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version