ದೇವರಮನೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು
ಮೂಡಿಗೆರೆ: ಕಾಫಿನಾಡಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಗೆಳೆಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ತೀವ್ರ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಮೂಡಿಗೆರೆ ತಾಲೂಕಿನಲ್ಲಿ ಸಂಭವಿಸಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನರೇಶ್ (26) ಮೃತ ದುರ್ದೈವಿ. ಈತ ಮೂಲತಃ ಕಲಬುರಗಿ ಮೂಲದವನೆಂದು ತಿಳಿದುಬಂದಿದೆ.
ನರೇಶ್ ತನ್ನ ಸ್ನೇಹಿತರೊಂದಿಗೆ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ದೇವರಮನೆ ಗುಡ್ಡಕ್ಕೆ ಪ್ರವಾಸ ಬಂದಿದ್ದ. ಪ್ರವಾಸ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ವೇಳೆ ವಾತಾವರಣದಲ್ಲಿ ವಿಪರೀತ ಚಳಿ ಅನುಭವಕ್ಕೆ ಬಂದಿದೆ. ಈ ವೇಳೆ ಚಳಿಗಾಗಿ ಕೋಟ್ ಧರಿಸಲು ಬೈಕ್ ನಿಲ್ಲಿಸಿದ ಸಂದರ್ಭದಲ್ಲಿ ದಿಢೀರನೆ ತೀವ್ರ ಹೃದಯಾಘಾತ ಸಂಭವಿಸಿದೆ.
ಯುವಕನಿಗೆ ಹಠಾತ್ತನೆ ಎದೆನೋವು ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತ ಸ್ನೇಹಿತರು ಹಾಗೂ ಸ್ಥಳೀಯರ ನೆರವಿನಿಂದ ನರೇಶ್ನನ್ನು ಬಣಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಆತ ಕೊನೆಯುಸಿರೆಳೆದಿದ್ದನು. ವೈದ್ಯರು ಪರಿಶೀಲಿಸಿ ನರೇಶ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಹಠಾತ್ ದುರ್ಘಟನೆಯಿಂದ ಪ್ರವಾಸಕ್ಕೆ ತೆರಳಿದ್ದ ಸ್ನೇಹಿತರ ಬಳಗದಲ್ಲಿ ಹಾಗೂ ಕುಟುಂಬದಲ್ಲಿ ತೀವ್ರ ಶೋಕ ಆವರಿಸಿದೆ. ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























