LPG ಗ್ರಾಹಕರಿಗೆ ಕೇಂದ್ರ ಸರ್ಕಾರದ ಭರ್ಜರಿ ರಿಲೀಫ್: ಗ್ಯಾಸ್ ಸಿಲಿಂಡರ್ ಬುಕಿಂಗ್ ಗಡುವು 25 ದಿನಗಳಿಗೆ ಇಳಿಕೆ!
ನವದೆಹಲಿ: ಗ್ರಾಮೀಣ ಭಾಗದ ಗೃಹಬಳಕೆಯ ಎಲ್ ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರವು ದೊಡ್ಡ ರಿಲೀಫ್ ನೀಡಿದ್ದು, ಎರಡು ಸಿಲಿಂಡರ್ ಬುಕಿಂಗ್ ನಡುವೆ ಇದ್ದ ಕಡ್ಡಾಯ 45 ದಿನಗಳ ಗಡುವನ್ನು 25 ದಿನಗಳಿಗೆ ಇಳಿಕೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇಂಡಿಯನ್ ಆಯಿಲ್ (IOCL), ಬಿಪಿಸಿಎಲ್ (BPCL) ಮತ್ತು ಎಚ್‌ಪಿಸಿಎಲ್ (HPCL) ನಂತಹ ತೈಲ ಮಾರಾಟ ಕಂಪನಿಗಳಿಗೆ ಈ ಹೊಸ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಸೂಚಿಸಿದೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಯುದ್ಧದ ಪರಿಣಾಮ ಹಾಗೂ ಜಾಗತಿಕವಾಗಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದರಿಂದ, ದೇಶದಲ್ಲಿ ಎಲ್ ಪಿಜಿ ಸಿಲಿಂಡರ್‌ಗಳ ದುರ್ಬಳಕೆ ಹಾಗೂ ಅಕ್ರಮ ದಾಸ್ತಾನು ತಡೆಯಲು ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿತ್ತು. ಈ ವೇಳೆ ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 25 ದಿನಗಳಿಗೆ ಹಾಗೂ ಗ್ರಾಮೀಣ ಭಾಗಗಳಲ್ಲಿ 45 ದಿನಗಳಿಗೆ ಹೆಚ್ಚಿಸಲಾಗಿತ್ತು. ಇದರಿಂದ ಹಳ್ಳಿಯ ಜನರಿಗೆ ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗಿತ್ತು.
ಪ್ರಸ್ತುತ ದೇಶದಲ್ಲಿ ಎಲ್ ಪಿಜಿ ಪೂರೈಕೆ ಪರಿಸ್ಥಿತಿ ಸಂಪೂರ್ಣ ಸುಧಾರಿಸಿರುವುದರಿಂದ ಮತ್ತು ಸಿಲಿಂಡರ್ ರಿಫಿಲ್ ಬಾಕಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಮಾತನಾಡಿ, “ಇನ್ನು ಮುಂದೆ ನಗರ ಅಥವಾ ಗ್ರಾಮೀಣ ಎಂಬ ಯಾವುದೇ ಭೇದವಿಲ್ಲದೆ, ದೇಶದ ಯಾವುದೇ ಭಾಗದ ಗೃಹಬಳಕೆಯ ಎಲ್ ಪಿಜಿ ಗ್ರಾಹಕರು ಕೇವಲ 25 ದಿನಗಳ ಅಂತರದಲ್ಲೇ ಮತ್ತೊಂದು ಸಿಲಿಂಡರ್ ಅನ್ನು ಮರು ಬುಕಿಂಗ್ ಮಾಡಿಕೊಳ್ಳಬಹುದು” ಎಂದು ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಭಾಗದ ಕೋಟ್ಯಂತರ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























