ನೆಲ್ಯಾಡಿ ಯು—ಟರ್ನ್: ಸೆಪ್ಟೆಂಬರ್ 9ರಂದು ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆ
ನೆಲ್ಯಾಡಿ/ಕಡಬ: ಸೈಂಟ್ ಜಾರ್ಜ್ ಕಾಲೇಜು ಹಾಗೂ ಬೆಥನಿ ವಿದ್ಯಾಸಂಸ್ಥೆಯ ನಡುವಿನ ರಸ್ತೆಯಲ್ಲಿ ಯು–ಟರ್ನ್ ಮಾಡಲೇಬೇಕು ಎಂದು ಒತ್ತಾಯಿಸಿ, ಸೆಪ್ಟೆಂಬರ್ 9ರ ಬುಧವಾರದಂದು ಕಡಬ ತಾಲೂಕಿನ ನೆಲ್ಯಾಡಿಯ ವಿದ್ಯಾನಗರದಲ್ಲಿ ಸಾರ್ವಜನಿಕರು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಸೈಂಟ್ ಜಾರ್ಜ್ ಕಾಲೇಜು ಮತ್ತು ಬೆಥನಿ ವಿದ್ಯಾಸಂಸ್ಥೆಯ ನಡುವಿನ ರಸ್ತೆಯಲ್ಲಿ ಯು–ಟರ್ನ್ ಇಲ್ಲದಿರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ವಾಹನ ಸವಾರರು ಸುಮಾರು 5 ಕಿ.ಮೀ ದೂರ ಸಂಚರಿಸಿ ಯು–ಟರ್ನ್ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಯು-ಟರ್ನ್ ಇಲ್ಲದ ಕಾರಣ ಇಲ್ಲಿನ ಸೈಂಟ್ ಜಾರ್ಜ್ ಮತ್ತುಬೆಥನಿ ವಿದ್ಯಾಸಂಸ್ಥೆಗಳಿಗೆ ತೆರಳುವ ಶಾಲಾ ವಾಹನಗಳು, ಪೋಷಕರ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಅಪಾಯಕಾರಿಯಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ಹಿರಿಯ ನಾಗರಿಕರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚಾರ ದಟ್ಟಣೆ ಮತ್ತು ಅಪಘಾತಗಳ ಭೀತಿಯನ್ನು ಎದುರಿಸುತ್ತಿದ್ದಾರೆ. ಇಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಹೇಗೆ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಒಂದೆಡೆ ಅಪಾಯಕಾರಿ ವೇಗದಲ್ಲಿ ಬರುತ್ತಿರುವ ವಾಹನಗಳು, ಇನ್ನೊಂದೆಡೆಯಲ್ಲಿ ರಸ್ತೆದಾಡುವ ವಿದ್ಯಾರ್ಥಿಗಳು, ಮತ್ತೊಂದೆಡೆ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುವ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುವಂತಹ ಅನಿವಾರ್ಯ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಈ ರಸ್ತೆಯು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ. ಇದರಿಂದಾಗಿ ಇಲ್ಲಿ ದಿನ ನಿತ್ಯ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇದೆ. ದೊಡ್ಡ ಅಪಘಾತವಾಗಿ ಸಾರ್ವಜನಿಕರ ಪ್ರಾಣ ಬಲಿಪಡೆಯುವವರೆಗೂ ಕಾಯದೇ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಈ ಸ್ಥಳ ಪರಿಶೀಲನೆ ನಡೆಸಿ, ಸೈಂಟ್ ಜಾರ್ಜ್ ಕಾಲೇಜು ಹಾಗೂ ಬೆಥನಿ ವಿದ್ಯಾಸಂಸ್ಥೆಯ ನಡುವಿನ ಸೂಕ್ತ ಸ್ಥಳದಲ್ಲಿ ಯು- ಟರ್ನ್ ನೀಡುವ ಮೂಲಕ ಸಾರ್ವಜನಿಕರಿಗೆ ಶಾಶ್ವತ ಪರಿಹಾರ ನೀಡಬೇಕು. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























