ಕೇವಲ ಸೆಲ್ಫಿಗಾಗಿ ಪ್ರಾಣವನ್ನೇ ಕಳೆದುಕೊಂಡ ಯುವಕ: ಮತ್ತೋರ್ವ ಯುವಕ ಪಾರು!

ಚಾಮರಾಜನಗರ: ಸೆಲ್ಫಿ ಹುಚ್ಚಾಟಕ್ಕೆ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ಕೊಳ್ಳೇಗಾಲ ತಾಲ್ಲೂಕು ಶಿವನಸಮುದ್ರದ ಜಿರೋ ಪಾಯಿಂಟ್ ಬಳಿ ನಡೆದಿದೆ. ಘಟನೆಯ ವೇಳೆ ಓರ್ವ ಅಪಾಯದಿಂದ ಪಾರಾಗಿದ್ದಾನೆ.
ಬೆಂಗಳೂರು ಮೂಲದ ಪುನೀತ್ (18) ಮೃತ ದುರ್ದೈವಿಯಾಗಿದ್ದಾನೆ. ಲೋಹಿತ್ (19) ಎಂಬ ಯುವಕನನ್ನು ತೆಪ್ಪ ನಡೆಸುವವರು ರಕ್ಷಿಸಿ, ಮಾನವೀಯತೆ ಮೆರೆದಿದ್ದಾರೆ.
ಐವರು ಸ್ನೇಹಿತರು ಶಿವನಸಮುದ್ರಕ್ಕೆ ಬಂದಿದ್ದರು. ಈ ವೇಳೆ ಸೆಲ್ಪಿಗಾಗಿ ಕಲ್ಲುಗಳ ಮೇಲೆ ಪುನೀತ್ ಹಾಗೂ ಲೋಹಿತ್ ಏರಿದ್ದರು. ಈ ವೇಳೆ ಇಬ್ಬರೂ ಕೂಡ ಕಾಲು ಜಾರಿ ಬಿದ್ದಿದ್ದಾರೆ. ಲೋಹಿತ್ ನನ್ನು ತಕ್ಷಣವೇ ತೆಪ್ಪ ನಡೆಸುವವರು ರಕ್ಷಿಸಿದ್ದಾರೆ. ಆದ್ರೆ ಪುನೀತ್ ನೀರುಪಾಲಾಗಿದ್ದಾನೆ.
ಪವರ್ ಸ್ಟೇಷನ್ ನಾಲೆಯ ನೀರು ಹಾಗು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದರಿಂದ ಹೊರ ಹರಿವು ಹೆಚ್ಚಿದೆ. ಅಪಾಯದ ಅರಿವಿದ್ದರೂ ಸೆಲ್ಫಿಗಾಗಿ ಪ್ರಾಣ ತೆತ್ತ ಯುವಕರ ಬಗ್ಗೆ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನದಿಯ ಬಳಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆಯುವ ವೇಳೆ ಸಾಕಷ್ಟು ಜನರು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಲೇ ಇದ್ದರೂ, ಈಗಲೂ ಜನರು ಸೆಲ್ಫಿ ಹುಚ್ಚಿನಿಂದಾಗಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇದೆ.