ಅಜ್ಜನ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ಯುವಕ ಅಪಘಾತದಲ್ಲಿ ಸಾವು

27/11/2023
ಚಾಮರಾಜನಗರ: ನಿಧನರಾದ ತನ್ನ ಅಜ್ಜನ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ಮೊಮ್ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಧಾರುಣ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಚಾಮರಾಜನಗರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನಿತೀಶ್ ಪೂಜಾರಿ ಮೃತ ದುರ್ದೈವಿ. ಉಡುಪಿಯ ಹೆಬ್ರಿ ಮೂಲದ ವಿದ್ಯಾರ್ಥಿಯಾಗಿದ್ದು ಸಿಮ್ಸ್ ನಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ 11.30 ರ ಸುಮಾರಿಗೆ ಅಜ್ಜ ಅಸುನೀಗಿದ ಸುದ್ದಿ ತಿಳಿದು ಬಸ್ ಗಳು ಯಾವುದೂ ಇಲ್ಲದಿರುವುದರಿಂದ ಬೈಕ್ ನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೊಮ್ಮಗನೂ ಅಸುನೀಗಿದ್ದಾನೆ.
ಸ್ವಯಂ ಅಪಘಾತವೋ ಇಲ್ಲವೇ ಬೇರೆ ವಾಹನ ಡಿಕ್ಕಿಯಾಗಿ ಮೃತಪಟ್ಟರೇ ಎಂಬುದು ಇನ್ನೂ ಖಚಿತವಾಗಿಲ್ಲ, ಸದ್ಯ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೃತನ ಪಾಲಕರು ಬಂದ ಬಳಿಕ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದೆ ಎಂದು ತಿಳಿದು ಬಂದಿದೆ.